ಉಡುಪಿ, ಆ 14 (DaijiworldNews/DB): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಒಂದೇ ದಿನ ಒಟ್ಟು 20,444 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಈ ಪೈಕಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ -34, ಚೆಕ್ಕು ಅಮಾನ್ಯ ಪ್ರಕರಣ-226, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ-24, ಎಂ.ವಿ.ಸಿ ಪ್ರಕರಣ-90, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-1, ಎಂ.ಎಂಆರ್.ಡಿ ಆಕ್ಟ್ ಪ್ರಕರಣ-12, ವೈವಾಹಿಕ ಪ್ರಕರಣ-2, ಭೂಸ್ವಾಧೀನ ಪ್ರಕರಣ-1, ಸಿವಿಲ್ ಪ್ರಕರಣ-115, ಇತರೇ ಕ್ರಿಮಿನಲ್ ಪ್ರಕರಣ- 1501 ಹಾಗೂ ವ್ಯಾಜ್ಯ ಪೂರ್ವ ದಾವೆ-18438 ರಾಜಿಮುಖಾಂತರ ಇತ್ಯರ್ಥಪಡಿಸಿ 11,11,51,425 ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.
13 ವರ್ಷ ದೂರವಾಗಿದ್ದ ದಂಪತಿಗಳ ಮಿಲನ
ಸುಮಾರು 13 ವರ್ಷಗಳಿಂದ ಬೇರೆ ಬೇರೆಯಾಗಿದ್ದ ದಂಪತಿ ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಮನಸ್ತಾಪ ದೂರ ಮಾಡಿ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದರು. ನ್ಯಾಯಾಧೀಶರು ಹಾಗೂ ವಕೀಲರ ಮಧ್ಯಸ್ಥಿಕೆಯಿಂದ ದಂಪತಿ ಸಹಜೀವನಕ್ಕೆ ಸಮ್ಮತಿ ನೀಡಿದರು. ಇನ್ನೊಂದು ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಎರಡು ವೈವಾಹಿಕ ಪ್ರಕರಣದಲ್ಲಿ ದಂಪತಿಗಳು ತಮ್ಮ ವೈಮನಸ್ಸನ್ನು ಮರೆತು ಒಂದಾದರು.
ಸುಮಾರು 16 ವರ್ಷ ಹಳೆಯದಾದ ಅಣ್ಣ ತಮ್ಮಂದಿರ ನಡುವೆ ಬಾಕಿ ಇದ್ದ ಅಮಲ್ಜಾರಿ ಸಂಖ್ಯೆ 11/17 ರ ಪ್ರಕರಣದಲ್ಲಿ 15,00,000 ರೂ. ಇಬ್ಬರು ಪಕ್ಷಗಾರರು ರಾಜೀ ಸಂಧಾನ ಮಾಡಿಕೊಂಡರು. ಅಣ್ಣ ತಮ್ಮ
35 ವರ್ಷ ಹಳೆಯ ವೈಷಮ್ಯಸುಖಾಂತ್ಯ
ಸಂಬಂಧಿಕರ ನಡುವೆ ಸುಮಾರು 35 ವರ್ಷಗಳ ಹಿಂದಿನಿಂದ ಇದ್ದ ವೈಷಮ್ಯ ಅದಾಲತ್ ಮೂಲಕ ಸುಖಾಂತ್ಯ ಕಂಡಿತು. 2017ರಲ್ಲಿ ಪಾಲು ವಿಭಾಗದ ದಾವೆ ಹೂಡಿದ್ದು ಉಭಯ ಪಕ್ಷಗಾರರ ವಿಚಾರಣೆ ನಡೆದು ಪ್ರಕರಣದ ತೀರ್ಪನ್ನು ಇದೇ ಆಗಸ್ಟ್ 19ಕ್ಕೆ ಕಾಯ್ದಿರಿಸಲಾಗಿತ್ತು. ದಾವೆಯಲ್ಲಿ ಒಟ್ಟು 25 ಜನ ಪಕ್ಷಗಾರರಿದ್ದು ನ್ಯಾಯಾಧೀಶರು, ವಕೀಲರು, ಹಾಗೂ ಹಿರಿಯರ ಸಲಹೆಯಿಂದ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಸಮಕ್ಷಮ ರಾಜೀ ಸಂಧಾನದ ಮೂಲಕ ಪಾಲು ವಿಭಾಗ ಮಾಡಿಕೊಂಡು ತಮ್ಮ ಭಾಗಕ್ಕೆ ಬಂದ ಪಾಲಿನಲ್ಲಿ ದಾರಿಗೆ ಸಮನಾದ ಜಾಗವನ್ನು ಬಿಟ್ಟುಕೊಡಲು ಒಪ್ಪಿಕೊಂಡು ಸೌಹಾರ್ದಯುತವಾಗಿ ಸಂಧಾನ ಮಾಡಿಕೊಂಡರು.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಯ ಸಹಕಾರದೊಂದಿಗೆ ಲೋಕ್ ಅದಾಲತ್ ನಡೆಯಿತು.