ಕಾರ್ಕಳ, ಆ 14 (DaijiworldNews/DB): ರಾಷ್ಟ್ರ ಧ್ವಜಕ್ಕೆ ಜಾತಿ, ಧರ್ಮದ ಬೇಧವಿಲ್ಲ. ದೇಶದ ಎಲ್ಲ ಬಾಂಧವರು ದೇಶಭಕ್ತರಾಗಿಬೇಕು. ತ್ರಿವರ್ಣ ಧ್ವಜವಿಲ್ಲದೆ ದೇಶಕ್ಕೆ ಗೌರವವಿಲ್ಲ. ಪ್ರತಿಯೊಬ್ಬರ ಮನಸ್ಸಲ್ಲಿ ತ್ರಿವರ್ಣ ಧ್ವಜದ ಬಗ್ಗೆ ಗೌರವ ಹುಟ್ಟಬೇಕು ಎಂಬ ಕಾರಣಕ್ಕೆ ಹರ್ ಘರ್ ತಿರಂಗಾ ದೇಶದಲ್ಲೆಡೆ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಜಿಲ್ಲಾ ಯುವ ಮೋರ್ಚದ ವತಿಯಿಂದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ನಗರದಲ್ಲಿ ನಡೆದ ಬ್ರಹತ್ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರಕ್ಕಾಗಿ ಹಲವು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲ ಆತ್ಮಗಳಿಗೆ ಅಮೃತ ಮಹೋತ್ಸವ ಸಂದರ್ಭ ಗೌರವ ಸಲ್ಲಿಸಬೇಕಿದೆ. .ದೇಶಕ್ಕಾಗಿ ಎದೆಯೊಡ್ಡಿ ಪ್ರಾಣ ತ್ಯಾಗ ಮಾಡಿದ ಸೇನಾನಿಗಳಿಂದ ನಾವಿಂದು ಬದುಕುತ್ತಿದ್ದೇವೆ. 18 ಸಾವಿರ ಕಿ.ಮೀ ದೂರದ ಗಡಿಯಲ್ಲಿ, ನಮ್ಮ ಯೋಧರು ಪ್ರಾಣ ಇಟ್ಟು ನಮ್ಮನ್ನು ಕಾಯುತ್ತಿದ್ದಾರೆ. ದೇಶ ಕಾಯುವ ಶಕ್ತಿ ಸೈನಿಕರಲ್ಲಿದರೆ ಅವರ ಹೋರಾಟದ ಜತೆ ನಾವೆಲ್ಲರೂ ನಿಲ್ಲಬೇಕಿದೆ ಎಂದರು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ದೇಶದ ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ದೊಡ್ಡ ಮಟ್ಟದಲ್ಲಿದೆ. ಸ್ವಾತಂತ್ರಕ್ಕೂ ಮೊದಲು ಪೋರ್ಚುಗೀಸರ ವಿರುದ್ಧ ರಣಕಹಳೆಯನ್ನು ವೀರರಾಣಿ ಅಬ್ಬಕ್ಕ ಮೊಳಗಿಸಿದ್ದರು. ಸುಳ್ಯದ ರೈತ ನಾಯಕರು ಬ್ರಿಟಿಷರ ವಿರುದ್ಧ ಸಿಡಿದೆದ್ದು 12 ದಿನಗಳ ಕಾಲ ಸ್ವತಂತ್ರರಾಗಿದ್ದರು ಎಂದು ನೆನಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಪ್ರಭಾರಿ ಉದಯಕುಮಾರ್, ಯಶಪಾಲ್ ಸುವರ್ಣ ನವೀನ್ ಶೆಟ್ಟಿ, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಹಿರಿಯರಾದ ಭೋಳ ಪ್ರಭಾಕರ ಕಾಮತ್, ಎಂ.ಕೆ. ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವಿಖ್ಯಾತ್ ಶೆಟ್ಟಿ ಸ್ವಾಗತಿಸಿ, ಸುಹಾಸ್ ಶೆಟ್ಟಿ ವಂದಿಸಿದರು. ಸ್ವರಾಜ್ ಮೈದಾನದಿಂದ ಗಾಂಧಿ ಮೈದಾನದ ತನಕ, 15 ಮೀ ಉದ್ದದ ತಿರಂಗಾ ಯಾತ್ರ ನಡೆಯಿತು.