ಬಂಟ್ವಾಳ, ಆ 13 (DaijiworldNews/HR): ದೇಶದ ಸ್ವಾತಂತ್ರ್ಯ ಕ್ಕಾಗಿ ಸ್ವಾಭಿಮಾನದ ತುಳುನಾಡಿನಲ್ಲಿ ಅನೇಕ ಸಾಹಸದ ಹೋರಾಟಗಳು ನಡೆದಿದ್ದು, ಉಳ್ಳಾಲದ ಅಬ್ಬಕ್ಕ ಹಾಗೂ ಕೊಡಗಿನ ವೀರರಾಜರು ನಡೆಸಿದ ಹೋರಾಟಗಳನ್ನು ಎಂದಿಗೂ ಮರೆಯುವಂತಿಲ್ಲ ಎಂದು ಕಾರ್ಕಳದ ಪತ್ರಕರ್ತ ಶ್ರೀಕಾಂತ ಶೆಟ್ಟಿ ಹೇಳಿದರು.
ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಂಟವಾಳದ ಬಂಟರ ಭವನದಲ್ಲಿ ನಡೆದ "ಅಮೃತಭಾರತಿಗೆ ಗಾನನುಡಿಯ ದೀವಿಗೆ" ಕಾರ್ಯಕ್ರಮದಲ್ಲಿ ಅವರು "ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಯ ಕಣಗಳು" ಎಂಬ ವಿಷಯದಲ್ಲಿ ಮಾತನಾಡಿದ ಅವರು, ಪ್ರಥಮ ಸ್ವಾತಂತ್ರ್ಯ ದಂಗೆಯ ಮೊದಲು ತುಳುನಾಡಿನಲ್ಲಿ ಬ್ರಿಟೀಷರ ವಿರುದ್ಧ ನಡೆದ ಯಾವ ಹೋರಾಟವೂ ಯಾವ ಪಠ್ಯ ಪುಸ್ತಕದಲ್ಲೂ ಇಲ್ಲ, ಯಾರಿಗೂ ಗೊತ್ತಿಲ್ಲ. ಈ ನಿಟ್ಟಿನಲ್ಲಿ ತುಳುನಾಡಿನ ಸ್ವಾತಂತ್ರ ಹೋರಾಟದ ಕುರಿತಾಗಿ ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.
ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಕರಾವಳಿಯ ಅನೇಕ ಕಲಿಗಳು ಭಾಗವಹಿಸಿದ್ದು, ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ನಡೆಸಿದ ಹೋರಾಟ ಹಾಗೂ ಕೊಡಗು ಸುಳ್ಯದಲ್ಲಿ ನಡೆದ ಅಮರ ಸುಳ್ಯ ಕ್ರಾಂತಿದಂಗೆಯ ವೀರರಾಜರು ರಾಮೇಗೌಡ, ನಂದಾವರದ ಬಂಗರಸರು, ಉಪ್ಪಿನಂಗಡಿಯ ಮಂಜ ಇವರೆಲ್ಲರ ಶ್ರಮವನ್ನು ತುಳುನಾಡು ಎಂದಿಗೂ ಮರೆಯಬಾರದು. ಮತೀಯವಾದದ ಅಮಲನ್ನು ಮೈಗೂಡಿಸಿಕೊಂಡವರಿಂದ ಒಮ್ಮೆ ದೇಶ ವಿಭಜನೆ ಆಗಿದ್ದಿ,ಮತ್ತೆ ಮತ್ತೆ ವಿಭಜನೆ ನಡೆಯಬಾರದು, ದ್ವೇಷದ ಬೆಂಕಿಗೆ ದೇಶದ ಜನತೆಯನ್ನು ಕೊಲ್ಲುವ ಸ್ಥಿತಿ ಬಾರದ ಹಾಗೆ ಎಚ್ಚರ ವಹಿಸಬೇಕು ಎಂದವರು ಕರೆ ನೀಡಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಶಾಸಕ ರಾಜೇಶ್ ನಾಯ್ಕ್, ಎಸ್ಪಿ ಹೃಷಿಕೇಶ್ ಸೊನಾವಣೆ, ಬಂಟ್ವಾಳ ತಹಶಿಲ್ದಾರ್ ಸ್ಮಿತಾರಾಮು, ಇ.ಒ.ರಾಜಣ್ಣ, ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಸುದರ್ಶನ್, ಕಸ್ತೂರಿ ಪಂಜ, ಹರಿಕೃಷ್ಣ ಬಂಟ್ವಾಳ, ದೇವಪ್ಪ ಪೂಜಾರಿ, ಪ್ರತಾಪ್ ಸಿಂಹ ನಾಯಕ್, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು.
ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.