ಮಂಗಳೂರು, ಆ 13 (DaijiworldNews/HR): ರಾಜಕಾರಣವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶಸೇವೆ ಮಾಡಬಹುದು ಎಂದು ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ್ ವಿಠಲ ಕಿಣಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ, ಪ್ರೆಸ್ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಯೋಜಿಸಿದ ಸಂವಾದದಲ್ಲಿ ಮಾತನಾಡಿದ ಅವರು, ಹಿಂದಿನ ರಾಜಕಾರಣಿಗಳು ಒಳ್ಳೆಯವರಾಗಿದ್ದರು, ಅಂದು ರಾಜಕಾರಣದಲ್ಲಿ ತ್ಯಾಗ ಸೇವೆಗಳಿದ್ದವು. ರಾಜಕೀಯ ನಾಯಕರು ಪರಸ್ಪರ ಗೌರವ ನೀಡುತ್ತಿದ್ದರು. ರಾಜಕೀಯ ಪಕ್ಷಗಳು ಬೇರೆ ಬೇರೆಯಾಗಿದ್ದರೂ ಎಲ್ಲ ರಾಜಕಾರಣಿಗಳ ಉದ್ದೇಶ ದೇಶದ ಸರ್ವಾಂಗೀಣ ಪ್ರಗತಿಯೇ ಆಗಿತ್ತು. ಆದರೆ ಈಗ ಅಂತಹ ಧ್ಯೇಯೋದ್ದೇಶಗಳು ಕಾಣುತ್ತಿಲ್ಲ, ಈಗಿನ ರಾಜಕೀಯ ನೋಡಿದರೆ ದುಃಖ ಆಗುತ್ತದೆ ಎಂದರು.
ಈ ಸಂದರ್ಭ ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ 94ರ ಹರೆಯದ ಮಟ್ಟಾರ್ ವಿಠಲ ಕಿಣಿ ಅವರನ್ನು ಸನ್ಮಾನಿಸಲಾಯಿತು.
ಪತ್ರಿಕಾಭವನ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ ಇದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.