ಕುಂದಾಪುರ, ಆ 13 (DaijiworldNews/DB): ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಗಂಗೊಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಇನ್ನೂ ಎರಡು ದೇವಸ್ಥಾನದಲ್ಲಿ ಕಳವುಗೈದಿರುವುದು ತಿಳಿದು ಬಂದಿದೆ.
ಕಂಬದಕೋಣೆ ನಿವಾಸಿ ಕರುಣಾಕರ್ ದೇವಾಡಿಗ (23) ಬಂಧಿತ ಆರೋಪಿ. ಕಂಬದಕೋಣೆ ಸಮೀಪ ಈತನನ್ನು ಬಂಧಿಸಲಾಗಿದ್ದು, ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಧೀಶರು ಆರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದ್ದಾರೆ.
ಅಪ್ರಾಪ್ತಳನ್ನು ವರಿಸಿದ್ದ ಕರುಣಾಕರ್ ಪತ್ನಿ ಜೊತೆ ಆಗಸ್ಟ್ 9ರಂದು ಭಕ್ತರ ಸೋಗಿನಲ್ಲಿ ಮರವಂತೆ ದೇವಳಕ್ಕೆ ಬಂದು ಗರ್ಭಗುಡಿಯೊಳಗೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದರು. ಈ ಪ್ರಕರಣ ಸಂಬಂಧ ಆತನನ್ನು ಬಂಧಿಸಲಾಗಿದೆ. ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ತೆಗ್ಗರ್ಸೆ ಗ್ರಾಮದ ಚಂದಣ ಎಂಬಲ್ಲಿ ಸೋಮಲಿಂಗೇಶ್ವರ ದೇವಳ, ಕೊಲ್ಲೂರು ಠಾಣೆ ವ್ಯಾಪ್ತಿಯ ಹೊಸೂರಿನ ದೇವಸ್ಥಾನಕ್ಕೂ ನುಗ್ಗಿ ಕಳ್ಳತನಗೈದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಂಧಿತ ಆರೋಪಿಯ ಪತ್ನಿ ಅಪ್ರಾಪ್ತ ವಯಸ್ಸಿನವಳಾದ ಕಾರಣ ಆಕೆಯನ್ನು ರಿಮಾಂಡ್ ಹೋಂಗೆ ದಾಖಲಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನಿರ್ದೇಶನದಂತೆ ಎಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ಸೂಚನೆಯಂತೆ ಎಸ್ಐ ವಿನಯ ಕೊರ್ಲಹಳ್ಳಿ ಅವರ ನೇತೃತ್ವದಲ್ಲಿ ಎಸ್ಐ ಜಯಶ್ರೀ ಹುನ್ನೂರ, ಸಿಬಂದಿ ಮೋಹನ ಪೂಜಾರಿ, ಶ್ರೀಧರ, ನಾಗೇಂದ್ರ, ಚಾಲಕ ದಿನೇಶ್ ಬೈಂದೂರು, ಸುಧೀರ ಪೂಜಾರಿ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.