ಪಡುಬಿದ್ರಿ, ಆ 13 (DaijiworldNews/MS): ವಿಶ್ವಕರ್ಮ ಸಮುದಾಯದ ಹರೀಶ್ ಪುತ್ತೂರು ಎಂದು ಪರಿಚಯಿಸಿಕೊಂಡು ಮೂಡು ಪಲಿಮಾರು ನಿವಾಸಿ ಶೋಭಾ ಅವರ ಮನೆಗೆ ಮೇ 6ರಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಶೋಭಾ ಅವರಿಂದ 1.65 ಲಕ್ಷ ರೂ.ಗಳ ಚಿನ್ನಾಭರಣವನ್ನು ಪಡೆದು ಮೋಸ ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಕುಂದಾಪುರದಲ್ಲಿ ಇದ್ದ ತನ್ನ 80 ಲಕ್ಷ ರೂ. ಮೌಲ್ಯದ ಜಾಗವು ಮಾರಾಟವಾಗಿದ್ದು, ಅದಾಖಲೆಗಳು ಬ್ಯಾಂಕ್ನಲ್ಲಿವೆ ಮತ್ತು ದಾಖಲೆಗಳನ್ನು ಪಡೆಯಲು ಹಣದ ಅಗತ್ಯವಿದೆ ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದ. . ಶೋಭಾ ತನ್ನ ಬಳಿ ಹಣವಿಲ್ಲ ಎಂದು ಹೇಳಿದರೂ ಆರೋಪಿ ಶೋಭಾ ಹಾಗೂ ಆಕೆಯ ಅಕ್ಕ ಶ್ಯಾಮಲಾ ಅವರನ್ನು ನಂಬಿಸಿ ಶ್ಯಾಮಲಾ ಅವರ ಬಳಿಯಿದ್ದ ಆರು ಗ್ರಾಂ ತೂಕದ ಚಿನ್ನದ ಬೆರಳಿನ ಉಂಗುರ, ಎರಡೂವರೆ ಪವನ್ ಚಿನ್ನದ ಸರ, ಒಂದೂವರೆ ಪವನ್ ತೂಕದ ಚಿನ್ನದ ಇಯರ್ ರಿಂಗ್ ಗಳನ್ನು ತೆಗೆದುಕೊಂಡು ಹೋಗಿದ್ದ. ಚಿನ್ನದ ಹಣವನ್ನು ತನ್ನ ಜಾಗ ಮಾರಾಟ ಮಾಡಿ ಬಂದಿರುವ ಹಣದಲ್ಲಿ ಮೇ 16ರಂದು ನಿಮ್ಮ ಹಣಕ್ಕೆ ಹೆಚ್ಚುವರಿಯಾಗಿ ಹಣ ಸೇರಿಸಿ ಕೊಡುತ್ತೇನೆ ಎಂದು ಶೋಭಾ ಅವರನ್ನು ನಂಬಿಸಿದ್ದ.
ಮೋಸದ ಉದ್ದೇಶದಿಂದಲೇ ಆರೋಪಿಯು ಈ ಕೃತ್ಯವೆಸಗಿದ್ದು, ಮೇ 14ರಿಂದ ಎರಡು ದಿನ ಮನೆಯಲ್ಲೇ ಬೀಡು ಬಿಟ್ಟಿದ್ದ. ಆ ಬಳಿಕ ಹಿಂದಿರುಗಿ ಬಾರದೆ ಮೋಸ ಮಾಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶೋಭಾ ಅವರು ತಿಳಿಸಿದ್ದಾರೆ.
ಇದೀಗ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.