ವಿಶೇಷ ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಆ 12 (DaijiworldNews/HR): ಮುಡಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಸಲಾಯಿ- ಬೇಂಗೂರು ನಡುವೆ ಹಾದು ಹೋಗಿರುವ ರಸ್ತೆ ಅಭಿವೃದ್ಧಿಗೆ ರೂ.1ಕೋಟಿ ಅನುದಾನದಲ್ಲಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಗುದ್ದಲಿ ಪೂಜೆ ನಡೆದು ಬರೋಬರಿ ಎಂಟು ತಿಂಗಳುಗಳೇ ಕಳೆದುಹೋಗಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಗಾದೆ ಮಾತು ಅಕ್ಷರಶಃ ಇಲ್ಲಿನ ಗ್ರಾಮಸ್ಥರ ಪಾಲಿನದಾಗಿದೆ.
ಬಜಗೋಳಿ-ಕೆರ್ವಾಸೆ-ಹೆಬ್ರಿ-ಆಗುಂಬೆಯ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಯ ನಡುವೆ ಕಾಣಸಿಗುವ ಪ್ರದೇಶವೇ ಬಜಗೋಳಿಯ ಪಾಲೊಟ್ಟು- ಪೊಸಲಾಯಿ-ಬೇಂಗೂರು ರಸ್ತೆ.
ಸುಮಾರು 200ರಷ್ಟು ಮನೆಗಳು ಈ ಪ್ರದೇಶ ವ್ಯಾಪ್ತಿಯಲ್ಲಿ ಇವೆ ಎಂದು ಅಂದಾಜಿಸಲಾಗಿದೆ. ಪಾಲೊಟ್ಟುನಿಂದ ಬೇಂಗೂರಿನ ಮೂಲಕವಾಗಿ ಕೆರ್ವಾಶೆ ತಲುಪಲು 4 ಕಿ.ಮೀ ಅಂತರ ಇದೆ.
ರೈತಾಪಿ ವರ್ಗವೇ ಹೆಚ್ಚಾಗಿ ನೆಲೆಸಿರುವ ಇಲ್ಲಿನವರು ವ್ಯವಹಾರಿಕವಾಗಿ ಕೆರ್ವಾಶೆಯ ಮೂಲಕ ಹೆಬ್ರಿ ತಲುಪಬೇಕಾದರೆ ಪಾಲೊಟ್ಟು-ಪೊಸಲಾಯಿ-ಬಜಗೋಳಿಯ ದಿಡಿಂಬಿರಿ ಮೂಲಕವಾಗಿ ಕೆರ್ವಾಶೆಗೆ ತಲುಪಲು 10 ಕಿ.ಮೀ ಕ್ರಮಿಸಬೇಕಾಗಿದೆ. ಒಂದೆಡೆಯಲ್ಲಿ ವಾಹನಗಳಿಗೆ ಹೆಚ್ಚುವರಿಯಾಗಿ ಇಂಧನ ವ್ಯಯಿಸಿ, ಖರ್ಚು ಭರಿಸಿ, ಸಮಯವನ್ನು ಅದಕ್ಕಾಗಿ ಕಾದಿರಿಸಬೇಕಾಗುತ್ತದೆ.
ಶಾಸಕ ವಿ.ಸುನೀಲ್ ಕುಮಾರ್ ಅವರು ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮುಡಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಬೇಂಗೂರು- ಪೊಸಲಾಯಿ ರಸ್ತೆ ನಿರ್ಮಾಣ ಕಾಮಗಾರಿಯ ಜನವರಿಯಲ್ಲಿ ನಡೆದ ಮೊದಲ ಗುದ್ದಲಿ ಪೂಜೆ ಇದಾಗಿತ್ತು.
ಕಾಮಗಾರಿ ಆರಂಭಿಸಲೆಂದು ಸ್ಥಳಕ್ಕೆ ತಂದಿದ್ದ ಯಂತ್ರೋಪಕರಣಗಳನ್ನು ಕೇವಲ ಒಂದು ವಾರದ ಅವಧಿಯಲ್ಲಿ ಹೊತ್ತೊಯ್ಯಲಾಗಿತ್ತು. ಆ ಬಳಿಕ ಜುಲಾಯಿ ತಿಂಗಳಿನಲ್ಲಿ ಮುಡಾರು ಗ್ರಾಮ ಪಂಚಾಯತ್ ಗ್ರಾಮಸಭೆ ನಡೆಯುವ ಮೂರು ದಿನಗಳ ಹಿಂದೆ ಮತ್ತೇ ಅದೇ ಯಂತ್ರೋಪಕರಣಗಳನ್ನು ಗುದ್ದಲಿ ಪೂಜೆ ನಡೆಸಿದ ಜಾಗದಲ್ಲಿ ತಂದಿರಿಸಲಾಗಿತ್ತಾದರೂ, ಮುಡಾರು ಗ್ರಾಮ ಪಂಚಾಯತ್ನಲ್ಲಿ ನಡೆದ ಗ್ರಾಮಸಭೆಯ ಮರುದಿನವೇ ಅಲ್ಲಿಂದ್ದ ಯಂತ್ರೋಪಕರಣಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವ ಅಂಶ ಬೆಳಕಿಗೆ ಬಂದಿದೆ.
ಸೇತುವೆ ನಿರ್ಮಾಣ :
ಚಿಕ್ಕಮಗಳೂರು ಸಂಸದರಾಗಿದ್ದ ಶ್ರೀಕಂಠಪ್ಪ ಅವರು ಇದೇ ಬೇಂಗೂರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಮುಖ ಕಾರಣರಾಗಿದ್ದರು. ಅದ್ದರಿಂದ ಪಾಲೊಟ್ಟು- ಕೆರ್ವಾಶೆ ಸಂಪಕಿಸಲು ಸಾಧ್ಯವಾಯಿತು.
ರಾಷ್ಟ್ರೀಯ ಕ್ರೀಡಾ ಪಟು ಮಲ್ಲಿಕಾ ಶೆಟ್ಟಿಯ ತವರೂರು:
ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಮಲ್ಲಿಕಾ ಶೆಟ್ಟಿಯ ತವರೂರು ಇದೇ ಬೇಂಗೂರು ಸಮೀಪದ ನಂದಿಬೆಟ್ಟು. ಬಡತನದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟಕರವಾಗಿದ್ದ ಆ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮನೆಯಲ್ಲಿ ಇದ್ದಾಗ ಮಲ್ಲಿಕಾ ಶೆಟ್ಟಿಗೆ ಶೈಕ್ಷಣಿಕ, ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದವರು ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಹಾಗೂ ದೈಹಿಕ ಶಿಕ್ಷಕ ಉಮೇಶ್ ರಾವ್ ಆಗಿದ್ದರು. ಅವರ ಸತ್ಕಾರ್ಯದಿಂದ ಮಲ್ಲಿಕಾ ಶೆಟ್ಟಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಲ್ಲಿ ಕಾರಣರಾಗಿ ಪ್ರಸ್ತುತ ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದಾರೆ.
ಪಾಲೊಟ್ಟು ನಿಂದ ಪೊಸಲಾಯಿ ತನಕ ಈಗಾಗಲೇ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡು ಒಂದು ಪಾರ್ಶ್ವದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದುವರೆಗೆ ಬೀದಿ ದೀಪ ಪ್ರಜ್ವಲಿಸದೇ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಪೊಸಲಾಯಿ ಯಿಂದ ಬೇಂಗೂರು ವರೆಗೆ ರಸ್ತೆಗೆ ಕಾಂಕ್ರೀಟ್ಕರಣ ವಾಗಿಲ್ಲ. ಬೀದಿ ದೀಪವೂ ಇಲ್ಲ. ಬೇಂಗೂರು ಪರಿಸರದಲ್ಲಿ ಬೆಳದಿರುವ ಮರಗಳ ನಡುವೆ ಖಾಸಗಿ ಹಾಗೂ ಸರಕಾರಿ ಜಾಗದಲ್ಲಿ ವಿದ್ಯುತ್ ತಂತ್ರಿ ಹಾದು ಹೋಗಿದೆ. ಮಳೆಗಾಲದಲ್ಲಿ ಮರಗಳ ಕೊಂಬೆಗಳ ಮುರಿತದಿಂದ ವಿದ್ಯುತ್ ಸರಬರಾಜು ಮೊಟಕುಗೊಳ್ಳುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಪಿಂಟೋ ತಿಳಿಸಿದ್ದಾರೆ.
ಬೇಂಗೂರು ಪರಿಸರದಲ್ಲಿ ವಾಸವಾಗಿರುವ ಸ್ಥಳೀಯರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾಬ್ಯಾಸಕ್ಕಾಗಿ ಕಿ.ಮೀ ದೂರದ ವರೆಗೆ ಕಾಲ್ನಡಿಗೆಯನ್ನೇ ಆಶ್ರಯಿಸಿಬೇಕಾಗುತ್ತದೆ. ದ್ವಿಚಕ್ರ ವಾಹನ ಹೊರತು ಪಡಿಸಿ ಯಾವುದೇ ವಾಹನಗಳು ಓಡಾಟ ನಡೆಸದ ಪರಿಣಾಮ ಹಿರಿಯ ನಾಗರಿಕರು ಅಸೌಖ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅವರನ್ನು ಕಿ.ಮೀ ವರೆಗೆ ಹೊಯ್ಯಯಬೇಕಾಗುತ್ತದೆ ಎಂದು ಪ್ರಭಾಕರ ಶೆಟ್ಟಿ, ಮೇಲ್ಮನೆ, ನಂದಿಬೆಟ್ಟು ಹೇಳಿದ್ದಾರೆ.
ಗುದ್ದಲಿಪೂಜೆ ಜನವರಿಯಲ್ಲಿ ನಡೆದಿದ್ದರೂ, ಕಾಮಗಾರಿ ಕೈಗೆತ್ತಿಕೊಳ್ಳುವ ಅದೇಶವನ್ನು ಮಾರ್ಚ್ ತಿಂಗಳಿನಲ್ಲಿ ನೀಡಲಾಗಿದೆ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸ್ವಚ್ಚತೆಯ ಕಾರ್ಯ ನಡೆಸಿದ್ದು, ಮಳೆಗಾಲ ಪೂರ್ಣಗೊಂಡ ಬಳಿಕ ಡಾಂಬರು ರಸ್ತೆ ನಿರ್ಮಾಣದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸಹಾಯಕ ಅಭಿಯಂತರರು ತ್ರಿನೇಶ್ ತಿಳಿಸಿದ್ದಾರೆ.