ಮಂಗಳೂರು, ಆ 12 (DaijiworldNews/MS): ನಮ್ಮ ದೇಶ ಸ್ವತಂತ್ರಗೊಂಡು 75 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ‘ಹರ್ ಘರ್ ತಿರಂಗಾ’ ಎಂಬ ಅಭಿಯಾನವು ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆ.
ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್ ನ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಈ ಅಭಿಯಾನವನ್ನು ನಡೆಸಿದರು.
ತ್ರಿಶಾ ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್ ನ ವಿದ್ಯಾರ್ಥಿಗಳು ಕುದ್ರೋಳಿ ಹಾಗೂ ಅಳಕೆಯ ಹಲವಾರು ಮನೆಗಳಿಗೆ ತೆರಳಿ ತ್ರಿವರ್ಣ ಧ್ವಜವನ್ನು ನೀಡುವ ಮೂಲಕ ತಮ್ಮ ನಿವಾಸಗಳಲ್ಲಿ ದಿನಾಂಕ 13 ಆಗಸ್ಟ್ 2022 ರಿಂದ 15 ಆಗಸ್ಟ್ 2022ರವರೆಗೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಅಮೃತ ಮಹೋತ್ಸವದ ಮಹತ್ವವನ್ನು ಸಾರ್ವಜನಿಕರ ಮನ ಮುಟ್ಟುವಂತೆ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಡೊಂಗರಕೇರಿ 42ನೇ ವಾರ್ಡ್ನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಜಯಶ್ರೀ ಕುಡ್ವ ಅವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕಾಗಿ ತ್ರಿವರ್ಣ ಧ್ವಜವನ್ನು ಕಾಲೇಜಿಗೆ ಒದಗಿಸಿದರು.
ಈ ಸಂದರ್ಭದಲ್ಲಿ ತ್ರಿಶಾ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಗಿರೀಶ್ ಮಾಡ್ಲ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುಪ್ರಭಾ, ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ.ಶಿಲ್ಪ ಶೆಟ್ಟಿ, ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾದ ಪ್ರೊ.ಆಡ್ಲಿನ್ ಪಿಂಟೋ, ಪ್ರೊ.ಚಂದನ್ ಕುಮಾರ್ ಮತ್ತು ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್.ನ ಪದಾಧಿಕಾರಿಗಳು, ಸ್ವಯಂ ಸೇವಕರು ಭಾಗವಹಿಸಿದರು.