ಕುಂದಾಪುರ, ಆ 12 (DaijiworldNews/DB): ವ್ಯಕ್ತಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಮೋಕ್ತೆಸರ ಸೂರ್ಯನಾರಾಯಣ ಉಪಾಧ್ಯ ಹೇಳಿದರು.
ಅವರು ಶುಕ್ರವಾರ ಕುಂಭಾಶಿಯ ಅಂಗನವಾಡಿ ಮತ್ತು ಮಹಿಳಾ ಮಂಡಳಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸುವ, ಶಾಲೆಗೆ ಆಸಕ್ತಿ ಮೂಡಿಸುವವಂತಹ ಹಾಗೂ ಮಕ್ಕಳ ಭವಿಷ್ಯವನ್ನು ರೂಪಿಸುವ ತಳಹದಿ. ನೈತಿಕ ಶಿಕ್ಷಣ ಪುಟ್ಟ ಮಕ್ಕಳಲ್ಲಿ ಇರುವ ಸೂಕ್ತ ಪ್ರತಿಭೆಯ ಆವಿಷ್ಕಾರಕ್ಕೆ, ಆತ್ಮವಿಶ್ವಾಸ ಮೂಡಲು ಸಹಕಾರಿಯಾಗುವುದು ಎಂದವರು ಅಭಿಪ್ರಾಯಪಟ್ಟರು.
ರಾಧದಾಸ್ ಅವರ ಹೋರಾಟ, ಅವಿರತ ಶ್ರಮದಿದಿಂದ ಸುಂದರವಾದ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡಿದೆ. ಎಲ್ಲಾ ಯೋಜನೆಯನ್ನು ಸರಕಾರದಿಂದ ಅಪೇಕ್ಷೀಸುವುದು ಕಷ್ಟ ಸಾಧ್ಯ. ಊರಿನ ಜನರ, ದಾನಿಗಳ, ಸಂಘಸಂಸ್ಥೆಯ ಸಹಕಾರದಿಂದ ಸುಂದರ ಕಟ್ಟಡ ನಿರ್ಮಾಣವಾಗಿದೆ ಎಂದರು.
ಕುಂಭಾಶಿ ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ಶ್ರೀನಿಧಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಕೋಟೇಶ್ವರ ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾಶುಂಪಾಲ ಎಸ್.ಜಿ. ಪ್ರಸನ್ನ ಐತಾಳ್ , ವಕೀಲ ರವಿಕಿರಣ್ ಮುರ್ಡೇಶ್ವರ್, ಜಿ.ಪಂ. ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಆವರ್ಸೆ ಸುಧಾಕರ್ ಶೆಟ್ಟಿ, ಕುಂದಪ್ರಭ ಸಂಪಾದಕ ಯು.ಎಸ್. ಶೆಣೈ ಉಪಸ್ಥಿತರಿದ್ದರು.
ಅಂಗನವಾಡಿ ಕಟ್ಟಡ ನಿರ್ಮಾಣ ಸಮಿತಿ ಮತ್ತು ಮಹಿಳಾ ಮಂಡಳಿಯ ಅಧ್ಯಕ್ಷೆ ರಾಧದಾಸ್ ಸ್ವಾಗತಿಸಿದರು. ಅರಣ್ ತೆಕ್ಕಟ್ಟೆ ಪ್ರಾರ್ಥಿಸಿದರು. ಕಾರ್ತಿಕ್ ಮತ್ತು ಕಿರಣ್ ಕಾರ್ಯಕ್ರಮ ನಿರೂಪಿಸಿದರು.