ಕುಂದಾಪುರ, ಆ 11 (DaijiworldNews/SM): ತಾಲೂಕಿನ ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಿನಬೆಟ್ಟು ಸಮೀಪದ ದಬ್ಬೆಕಟ್ಟೆ ಪ್ರಮುಖ ರಸ್ತೆಯ ಸಮೀಪದಲ್ಲಿ ಶಾಲಾ ವಾಹನದಲ್ಲಿ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದ ದೇವಕಿ ಪೂಜಾರ್ತಿ ಅವರ ತಲೆಗೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ತಾಲೂಕಿನ ತ್ರಾಸಿ, ಹೊಸನಾಡು ಗ್ರಾಮದ ನಿವಾಸಿ ಪ್ರವೀಣ್ (24) ಬಂಧಿತ ಆರೋಪಿ. ರಸ್ತೆಯ ಸಮೀಪದಲ್ಲಿ ಶಾಲಾ ವಾಹನದಲ್ಲಿ ಮಕ್ಕಳ ಬರುವಿಕೆಗಾಗಿ ದೇವಕಿ ಅವರು ಕಾಯುತ್ತಿದ್ದ ವೇಳೆ ಬೈಕ್ನಲ್ಲಿ ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಪರಿಣಾಮ ದೇವಕಿ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಹಾಲಾಡಿ ಹಾಗೂ ಕುಂದಾಪುರ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು, ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಬೈಕ್, ಸುಲಿಗೆ ಮಾಡಿದ್ದ ಚಿನ್ನದ ಉಂಗುರ, ಕರಿಮಣಿ ಸರ ಅಡವಿರಿಸಿ ಪಡೆದುಕೊಂಡಿರುವ 41,000 ರೂ. ನಗದು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ವೇಳೆ, ಪಿಎಸ್ಐ ನಿರಂಜನ್ ಗೌಡ ಬಿ.ಎಸ್, ಕುಂದಾಪುರ ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ರಾಜು, ಬಿ, ಅನಿಲ್ ಕುಮಾರ್, ಚಿದಾನಂದ, ಜೀಪು ಚಾಲಕ ಆನಂದ, ಕುಂದಾಪುರ ಉಪವಿಭಾಗ ಅಪರಾಧ ಪತ್ತೆದಳದ ರಾಮು ಹೆಗಡೆ ಮತ್ತು ರಾಘವೇಂದ್ರ ಉಪ್ಪುಂದ ಮತ್ತು ತಾಂತ್ರಿಕ ವಿಭಾಗದ ಸಿಬಂದಿ ದಿನೇಶ್ ಇದ್ದರು.