ಮಂಗಳೂರು, ಆ 11 (DaijiworldNews/SM): ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿಯನ್ನು ಹೊಂದಿದ್ದ ಚಿಕ್ಕಮಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕನ ಮೇಲಿನ ಆರೋಪವು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಗುರುವಾರ ಸಾಬೀತಾಗಿದೆ.
ಬಿಜೈಯ ರತ್ನಾಕರ ನಾಯ್ಕ್ಗೆ 3.6 ವರ್ಷ ಸಾದಾ ಸಜೆ ಹಾಗೂ 50 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವ ಮಾಹಿತಿಯ ಆಧಾರದಲ್ಲಿ ಮಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 2012ರ ಜು.30ರಂದು ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 6 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಲಾಗಿದೆ.