ವಿಶೇಷ ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಆ 11 (DaijiworldNews/HR): ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಕಾಂಕ್ರೀಟ್ ರಸ್ತೆಯಿಂದ ಜಲ್ಲಿಕಲ್ಲುಗಳು ಬೇರ್ಪತ್ತಿದೆ. ಇಂತಹ ರಸ್ತೆಯ ಸ್ಥಿತಿ-ಗತಿ ಬೆಳಕಿಗೆ ಬಂದಿರುವುದು ಕಾರ್ಕಳ ತಾಲೂಕಿನ ಮುಡಾರು ಗ್ರಾಮ ವ್ಯಾಪ್ತಿಯಲ್ಲಿರುವ ಮುಡ್ರಾಲು ಕ್ರಾಸ್- ಮಂಜಲ್ಪಾದೆಯ ಎಂಬಲ್ಲಿ. ಅದು ತೀರಾ ಗ್ರಾಮೀಣ ಪ್ರದೇಶವಾಗಿದ್ದು, ಹೆಚ್ಚಿನ ವಾಹನ ಸಂಚಾರ ಇಲ್ಲದೇ ಇರುವುದು ಗಮನಾರ್ಹವಾಗಿದೆ.
ಮುಡ್ರಾಲು ಕ್ರಾಸ್-ಮಂಜಲ್ಪಾದೆ ಅಂಗನವಾಡಿ ಕೇಂದ್ರದ ವರೆಗಿನ ರಸ್ತೆಯನ್ನು ಜಲಸಂಪನ್ಮೂಲ ಇಲಾಖೆಯು ವಾರಾಹಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿತ್ತು. ಸುಮಾರು 75 ಲಕ್ಷ ಮೊತ್ತ ಇದಕ್ಕಾಗಿ ವ್ಯಯಿಸಲಾಗಿದೆ. 780 ಮೀಟರ್ ಉದ್ದ ಹಾಘೂ 3.7 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ರಸ್ತೆ ಇದಾಗಿದೆ. ಕಾಂಕ್ರೀಟ್ ಮಿಶ್ರಣ ಮಾಡಲಾಗಿದ್ದ ಜಲ್ಲಿಕಲ್ಲು ರಸ್ತೆ ಬಹುಭಾಗದಲ್ಲಿ ಕಿತ್ತುಹೋಗಿ. ರಸ್ತೆಯಲ್ಲಿ ಚದುರಿಕೊಂಡಿದೆ. ಕಾಮಗಾರಿಯ ಗುಣಮಟ್ಟವು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ನಿರ್ಮಿಸಿದ ಮುಡ್ರಾಲು ಕ್ರಾಸ್ ಕಾಂಕ್ರೀಟ್ ರಸ್ತೆಯು ಮುಂದೆ ದುರ್ಗ, ಕೆರ್ವಾಶೆ ಸಂಪರ್ಕಿಸುವ ಗ್ರಾಮೀಣ ರಸ್ತೆಯೂ ಆಗಿದೆ. ಕಾಂಕ್ರೀಟ್ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದ್ದರೆ, ಮುಡಾರು ಗ್ರಾಮದ ಸುಮಾರು 150 ಮನೆಗಳ ಮಂದಿಗೆ ತುಂಬ ಅನುಕೂಲವು ಆಗುತ್ತಿತ್ತು.
1994ರ ಕಾಲಘಟ್ಟ ಅದಾಗಿತ್ತು ಇದೇ ಮುಡಾರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಕರಿಕಲ್ಲಿನ ಗಣಿಗಾರಿಕೆಯ ವಿರುದ್ಧ ಭಾರೀ ಹೋರಾಟ ನಡೆದಿತ್ತು. ಆ ಹೋರಾಟದಲ್ಲಿ ಗಿರೀಶ್ ಮಟ್ಟಣನವರ್, ಉಡುಪಿ ಪೇಜಾವರ ಶ್ರೀಗಳ ಸಹಿತಿ ರಾಜ್ಯದ ಆನೇಕ ನಾಯಕರು ಪಾಲೊಂಡಿದ್ದರು. ಹೋರಾಟದ ಕಿಚ್ಚು ಕರಿಕಲ್ಲಿನ ಗಣಿಗಾರಿಕೆಯನ್ನೇ ಸುಟ್ಟು ಹಾಕಲಾಗಿತ್ತು. ಅದೇ ಸಂದರ್ಭದಲ್ಲಿ ಪೊಲೀಸರು ಆಶ್ರುವಾಯು ಪ್ರಯೋಗಿಸಿದ ಘಟನೆ ನಡೆದಿತ್ತು. ಆ ವೇಳೆಗೆ ಹಲವಾರು ಮಂದಿ ಜೈಲು ಪಾಲಾಗಿದ್ದರು.
ಕಾಮಗಾರಿ ಪೂರ್ಣಗೊಂಡು ರಸ್ತೆಯನ್ನು ಲೋಕಾರ್ಪಣೆಗೈದಿರುವ ಸಂದರ್ಭದಲ್ಲಿ ರಸ್ತೆ ಗುಣಮಟ್ಟ ಸಮರ್ಪಕವಾಗಿಲ್ಲದಿರುವ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು. ಗ್ರಾಮ ಪಂಚಾಯತ್ ಸದಸ್ಯರ ದೂರಿನನ್ವಯ ಗ್ರಾಮ ಪಂಚಾಯತ್ ಅಧ್ಯಕ್ಷನ ನೆಲೆಯಲ್ಲಿ ಕಾಮಗಾರಿ ವಹಿಸಿಕೊಂಡ ಇಲಾಖೆಯನ್ನು ಸಂಪರ್ಕಿಸಿ, ಪತ್ರ ಮೂಲಕ ಅಕ್ಷೇಪ ಸಲ್ಲಿಸಿದ್ದೇನೆ ಎಂದು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಇನ್ನು ಕಾಮಗಾರಿ ಸಮರ್ಪಕವಾಗಿಲ್ಲದೇ ಇರುವ ಕುರಿತು ಹಲವು ದೂರುಗಳು ಇಲಾಖೆಗೆ ಬಂದಿದೆ. ಇದರ ಹಿನ್ನಲ್ಲೆಯಲ್ಲಿ ಕಾಮಗಾರಿ ಬಿಲ್ ರೂ.೭೫ ಲಕ್ಷ ತಡೆಹಿಡಿಯಲಾಗಿದೆ. ಮುಂದಿನ ತಿಂಗಳ ನಂತರ ದುಸ್ಥಿತಿಯಲ್ಲಿರುವ ರಸ್ತೆಯ ಗುಣಮಟ್ಟ ಕಾಪಾಡುವ ಕಾಮಗಾರಿ ನಡೆಯಲಿದೆ ಎಂದು ಜಲಸಂಪನ್ಮೂಲ ಇಲಾಖೆ(ವಾರಾಹಿ ಯೋಜನೆ)ಯ ಸಹಾಯಕ ಅಭಿಯಂತರರಾದ ಈಶ್ವರ ನಾಯಕ್ ತಿಳಿಸಿದ್ದಾರೆ.