ಪುತ್ತೂರು ಜ 31(MSP): ಕುಕ್ಕರ್ ಬ್ಲಾಸ್ಟ್ ಆಗಿ ಏಳು ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುತ್ತೂರಿನ ನೆಲ್ಯಾಡಿ ಬಳಿ ನಡೆದಿದೆ. ಗ್ಯಾಸ್ ಸ್ಟವ್ ನ ಮೇಲೆ ಕುಕ್ಕರ್ ನಲ್ಲಿ ತರಕಾರಿ ಬೇಯಲೆಂದು ಇಟ್ಟಿದ್ದ ಸಂದರ್ಭ ಕುಕ್ಕರ್ ಸಿಡಿದಿದೆ.
ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯೆ ಚೈತ್ರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಚೈತ್ರ ಅವರ ಏಳು ವರ್ಷದ ಪುತ್ರಿ ಆಜ್ಞಾ.ಕೆ.ಆರ್ (7) ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣ ಬಾಲಕಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತರಕಾರಿ ಬೆಂದು ಕುಕ್ಕರ್ ಸೀಟಿ ಕೂಗಿದಾಗ , ಸ್ಟಾವ್ ಆಫ್ ಮಾಡಿಲೆಂದು ಬಾಲಕಿ ಅಡುಗೆ ಮನೆಗೆ ತೆರಳಿದ್ದಾಳೆ. ಬಾಲಕಿ ಗ್ಯಾಸ್ ಬಂದ್ ಮಾಡುತ್ತಿದ್ದಂತೆ ಕುಕ್ಕರ್ ಏಕಾಏಕಿ ಸಿಡಿದಿದೆ. ಘಟನೆಗೆ ಕಳಪೆ ಗುಣಮಟ್ಟದ ಕುಕ್ಕರ್ ಕಾರಣ ಎನ್ನಲಾಗಿದೆ. ಹಳ್ಳಿಗಳಲ್ಲಿ ಕಡಿಮೆ ದರದಲ್ಲಿ ಮನೆ ಮನೆಗೆ ಮಾರಾಟ ಮಾಡುವ ಕಳಪೆ ಗುಣಮಟ್ಟದ ಕುಕ್ಕರ್ ಇದಾಗಿದ್ದು, ಇದೇ ಕಾರಣಕ್ಕೆ ಕುಕ್ಕರ್ ಸಿಡಿದಿದೆ ಎನ್ನಲಾಗಿದೆ.