ಮಂಗಳೂರು, ಆ 11 (DaijiworldNews/MS): ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಮುಖ ಮೂವರು ಹಂತಕರನ್ನು ಗುರುವಾರ ಬೆಳಿಗ್ಗೆ 8 ಗಂಟೆಗೆ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದು ದಕ್ಷಿಣ ಎಡಿಜಿಪಿ ಅಲೋಕ್ ಕುಮಾರ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
ಶಿಯಾಬ್,ಬಶೀರ್,ರಿಯಾಝ್
ಆರೋಪಿಗಳನ್ನು ಶಿಯಾಬ್ ಸುಳ್ಯ (33) ರಿಯಾಝ್ (27), ಬಶೀರ್ (29) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪೈಕಿ ಶಿಯಾಬ್ ಕ್ಯಾಂಪ್ಕೋಗೆ ಕೊಕೊವನ್ನು ಪೂರೈಸುವ ಕೆಲಸ ಮಾಡುತ್ತಿದ್ದರೆ, ರಿಯಾಜ್ ಅಂಗಡಿಗಳಿಗೆ ಕೋಳಿ ಸರಬರಾಜು ಹಾಗೂ ಬಶೀರ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಆರೋಪಿಗಳ ಬಗ್ಗೆ ಮಾಹಿತಿ ಮೊದಲೇ ಇತ್ತು. ಆದರೆ ಅವರು ಬೇರೆ ಬೇರೆ ಕಡೆ ಸ್ಥಳ ಬದಲಾಯಿಸುತ್ತಿದ್ದರಿಂದ ಪತ್ತೆ ಹಚ್ಚಲು ತಡವಾಯ್ತು. 15 ದಿನಗಳ ನಂತರ ಇದೀಗ ಪ್ರಮುಖ ಅರೋಪಿಗಳನ್ನು ಪತ್ತೆಹಚ್ಚಿದ್ದೇವೆ. ಇವರ ಮೇಲೆ ಹಳೆಯ ಯಾವುದೇ ಕೇಸ್ ಗಳು ಇಲ್ಲ. ಬಹುಶಃ ಈ ಪ್ರಕರಣವನ್ನು ಇನ್ನು 3-4 ದಿನಗಳ ನಂತರ ಪೊಲೀಸ್ ಇಲಾಖೆ ಎನ್ಐಎಗೆ ಹಸ್ತಾಂತರಿಸಲಿದ್ದು ಎಸ್ಪಿ ರಿಷಿಕೇಶ್ ಸೋನಾವಾನೆ ನೇತೃತ್ವದ ತನಿಖಾ ತಂಡ ಪ್ರಕರಣವನ್ನು ಭೇದಿಸಿದೆ. ಕಗ್ಗಂಟಾಗಿದ್ದ ಪ್ರಕರಣವನ್ನು ಬೇಧಿಸಿದ ತನಿಖಾ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು. ಹಾಸನ ಎಸ್ಪಿ ಹರಿರಾಮ್ ಶಂಕರ್ ಮತ್ತು ಇತರ ಅಧಿಕಾರಿಗಳು ಕೂಡ ಪ್ರಕರಣದ ತನಿಖೆಗೆ ಸಹಾಯ ಮಾಡಿದ್ದಾರೆ ಎಂದು ಎಡಿಜಿಪಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿರುವ ಆರೋಪಿ ಶಫೀಕ್ ತಂದೆ ಇಬ್ರಾಹಿಂ ಮೂರು ತಿಂಗಳಿನಿಂದ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಹೀಗಾಗಿ ಶಫೀಕ್ ಪ್ರವೀಣ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ.
ಹತ್ಯೆ ಮಾಡಿದ ತಕ್ಷಣ ಆರೋಪಿಗಳು ಬೇಕಲ ಮಸೀದಿಗೆ ಪರಾರಿಯಾಗಿದ್ದಾರೆ. ಆರೋಪಿಗಳು ಸುಳ್ಯ ಮತ್ತು ಪುತ್ತೂರು ಮೂಲದವರಾಗಿದ್ದು ಪ್ರಾಥಮಿಕ ವಿಚಾರಣೆ ನಡೆಸಿ ಪೊಲೀಸ್ ಕಸ್ಟಡಿಗೆ ಕೋರಲಾಗುವುದು ಆರೋಪಿಗಳಿಗೆ ಆಶ್ರಯ ನೀಡಿದರು, ಹತ್ಯೆಯ ಯೋಜನೆ ಮಾಸ್ಟರ್ ಮೈಂಡ್ ಹಾಗೂ ಪ್ರವೀಣ್ ಟಾರ್ಗೆಟ್ ಮಾಡಿರುವ ಇತರ ಕಾರಣಗಳ ಬಗ್ಗೆ ವಿಸ್ತೃತ ತನಿಖೆ ಬಳಿಕ ತಿಳಿದುಬರಬೇಕಿದೆ.
ಪ್ರಕರಣಕ್ಕೆ ಸಂಬಂಧಿಸಿ 5 ದ್ವಿಚಕ್ರ ವಾಹನ ವಶ ಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಮಾರಕಾಸ್ತ್ರ, ಅಡಗುತಾಣ, ಆರೋಪಿಗಳ ಆಶ್ರಯದಾತರ ಬಗ್ಗೆ ತನಿಖೆ ನಡೆಸಬೇಕಾಗಿದೆ. ಆರೋಪಿಗಳು ತಲೆಮರೆಸಿಕೊಂಡಿರುವುದರಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಲು ನಾವು ಯೋಚಿಸಿದ್ದೆವು, ಇನ್ನು ಮುಂದೆ ಯಾವುದೇ ಪ್ರಮುಖ ಪ್ರಕರಣಗಳಲ್ಲಿ ನಾವು ವಾರಂಟ್ ಹೊರಡಿಸಿ ಆರೋಪಿಗಳ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸಂಘಟನೆಗಳೊಂದಿಗೆ ಲಿಂಕ್ ಇರುವ ಶಂಕೆ ಬಗ್ಗೆ ಮೊದಲೇ ಹೇಳಿದ್ದೇವೆ. ಈ ಬಗ್ಗೆ ನಾವು ಕೂಲಂಕುಷವಾಗಿ ತನಿಖೆಯನ್ನು ನಡೆಸುತ್ತಿದ್ದೇವೆ. ಬಂಧಿತ ಆರೋಪಿಗಳಿಗೆ ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳ ಲಿಂಕ್ ಇದ್ದು ಲಿಂಕ್ ಇರುವ ಬಗ್ಗೆ ನಮಗೆ ಕೆಲವೊಂದು ಸಾಕ್ಷಿಗಳು ಕೂಡಾ ಲಭ್ಯವಾಗಿದೆ. ಈ ಬಗ್ಗೆ ನಾವು ಈಗಲೇ ಪರಿಪೂರ್ಣವಾಗಿ ಹೇಳುವುದು ಸರಿಯಾಗಲ್ಲ ತನಿಖೆಯನ್ನು ನಡೆಸಿ ಮುಂದಿನ ದಿನಗಳಲ್ಲಿ ಮಾಹಿತಿಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ
ಪತ್ರಿಕಾಗೋಷ್ಟಿಯಲ್ಲಿ ಎಸ್ಪಿ ಋಷಿಕೇಶ್ ಸೋನಾವಾನೆ, ಐಜಿಪಿ ಪಶ್ಚಿಮ ವಲಯದ ದೇವಜ್ಯೋತಿ ರೇ ಉಪಸ್ಥಿತರಿದ್ದರು.