ಕುಂದಾಪುರ, ಆ 10 (DaijiworldNews/SM): ಮಲೆನಾಡಿಗೆ ಹೊಂಡಿದಕೊಂಡಿರುವ ಬೈಂದೂರು ಭಾಗದದಲ್ಲಿ ಅನೇಕ ಹಳ್ಳಗಳಿದ್ದು, ಎಲ್ಲಿ ಅಗತ್ಯವಿದೆಯೋ ಅಲ್ಲಿ ಕಿರು ಸೇತುವೆ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುವುದು. ಜೊತೆಗೆ ಈ ಭಾಗಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು.
ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಯತಪ್ಪಿ ಹರಿಯುವ ನದಿಗೆ ಬಿದ್ದು ನೀರುಪಾಲಾಗಿ ಸಾವನ್ನಪ್ಪಿರುವ ಬಾಲಕಿ ಸನ್ನಿಧಿ (7) ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಬುಧವಾರ ಭೇಟಿ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಂದೆಂದೂ ಇಂತಹ ಘಟನೆಗಳು ಜರುಗದಂತೆ ಜಿಲ್ಲಾಡಳಿತ ದಿಟ್ಟ ಕ್ರಮ ಕೈಗೊಳ್ಳಲಿದ್ದು, ನರೇಗಾ ಯೋಜನೆಯಡಿ ಎಲ್ಲೆಲ್ಲಿ ಇಂತಹ ಕಿರು ಸೇತುವೆಗಳ ಅಗತ್ಯತೆ ಇದೆ ಎನ್ನುವುದನ್ನ ಪಟ್ಟಿ ಮಾಡಿ ಅದನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ನಿರ್ಧಾರವನ್ನು ಕೈಗೊಂಡಿದ್ದಾರೆ. ಪ್ರಾಕೃತಿಕ ವಿಕೋಪಗಳು ಯಾವ ಹಂತದಲ್ಲಿ ನಡೆಯುತ್ತದೆ ಎನ್ನುವುದು ಮುಂಚಿತವಾಗಿ ಹೇಳಲು ಸಾಧ್ಯವಿಲ್ಲ. ಘಟನೆ ನಡೆದಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಶಾಸಕ ಸುಕುಮಾರ್ ಶೆಟ್ಟಿ ಮಾತನಾಡಿ ಬೈಂದೂರಿನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕಾಲು ಸಂಕಗಳಿವೆ. ಪ್ರತಿ ಹಳ್ಳಿಗಳಲ್ಲಿ ಇಂತಹ ತೋಡುಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಈಗಾಗಲೇ 150ಕ್ಕೂ ಹೆಚ್ಚು ಕಾಲು ಸಂಕಗಳನ್ನು ಮಾಡಲಾಗಿದೆ. ಇನ್ನೂ ಕೂಡ ಹಲವು ಕಡೆಗಳಲ್ಲಿ ಮಾಡಲು ಬಾಕಿ ಇವೆ. ಈ ಒಂದೇ ಗ್ರಾಮದಲ್ಲಿ ಹಲವಾರು ತೋಡುಗಳಿದ್ದು, ಹೆಚ್ಚಿನವುಗಳಿಗೆ ಕಾಯಕಲ್ಪ ಮಾಡಲಾಗಿದೆ. ವಾಟೆಗುಂಡಿ ತೋಡಿಗೆ 11 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು ಲೊಕೋಪಯೋಗಿ ಇಲಾಖೆ ಅದರ ಕೆಲಸವನ್ನು ಮಾಡಲು ಬಾಕಿ ಇದೆ. ಅಧಿಕಾರಿಗಳು ಕ್ಲಪ್ತ ಸಮಯದಲ್ಲಿ ಅನುದಾನ ಬಳಸಿಕೊಂಡು ಕೆಲಸ ಮಾಡಿದ್ದಲ್ಲಿ ಈ ದುರಂತ ನಡೆಯುತ್ತಿರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.