ಮಂಗಳೂರು, ಆ 10 (DaijiworldNews/DB): ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಈಗಾಗಲೇ ಏಳು ಮಂದಿಯ ಬಂಧನವಾಗಿದೆ. ಪ್ರಕರಣ ಸಂಬಂಧಿಸಿ ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಎಡಿಜಿಪಿ ಅಲೋಕ್ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಮೂವರು ಆರೋಪಿಗಳ ಮನೆ, ವಿಳಾಸ, ಫೋಟೋ ಸೇರಿದಂತೆ ಮಾಹಿತಿಗಳು ನಮ್ಮ ಬಳಿ ಇದೆ. ಅವರನ್ನು ಶೀಘ್ರ ಪತ್ತೆ ಹಚ್ಚಲಾಗುವುದು. ಸುಮಾರು 7-8 ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಬೆಳ್ಳಾರೆಯಲ್ಲಿ ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡುವ ವಿಚಾರವಾಗಿ ಚರ್ಚಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಪೊಲೀಸರು ಮತ್ತು ಎನ್ಐಎ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಪಿಗಳಿಗೆ ಆಶ್ರಯ ನೀಡಿದವರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಪ್ರವೀಣ್ ಮತ್ತು ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಅಲೋಕ್ಕುಮಾರ್ ತಿಳಿಸಿದರು.
ಆರೋಪಿಗಳಿಗೆ ಪಿಎಫ್ಐ ಮತ್ತು ಎಸ್ಡಿಪಿಐ ನಂಟಿನ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಪೂರ್ವ ನಿಯೋಜಿತ ಹತ್ಯೆಯಾಗಿದೆ. ಯಾವುದೇ ದಾಖಲೆಗಳಿಲ್ಲದೆ ನಾನು ಮಾತನಾಡುವುದು ಸರಿಯಲ್ಲ. ಆದರೆ ಪಿಎಫ್ಐ ಜೊತೆಗೆ ಆರೋಪಿಗಳಿಗೆ ಸಂಪರ್ಕವಿರುವುದು ಗೊತ್ತಾಗಿದೆ. ಈ ಬಗ್ಗೆ ಇನ್ನಷ್ಟು ದಾಖಲೆಗಳನ್ನು ಕಲೆ ಹಾಕಲಾಗುವುದು ಎಂದು ವಿವರಿಸಿದರು.
ಹಂತಕರಿಗೆ ಕೇರಳ ಸಂಪರ್ಕ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಬಂಧನವಾಗಿರುವ ಏಳು ಮಂದಿ ಸುಳ್ಯದವರು. ಇನ್ನೂ ಮೂವರ ಬಂಧನ ಬಾಕಿ ಇದ್ದು, ಅವರ ಬಂಧನದ ಬಳಿಕ ಕೇರಳ ಸಂಪರ್ಕವಿದಯೇ ಎಂದು ತನಿಖೆ ಮಾಡಲಾಗುವುದು ಎಂದರು.