ಸುಳ್ಯ, ಆ 10 (DaijiworldNews/MS): ಸುಳ್ಯದ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ಯುವಕನೊಬ್ಬ ತಲವಾರು ಹಿಡಿದು ರಸ್ತೆ ಬದಿಯಲ್ಲಿ ಓಡಾಡುವ ಮೂಲಕ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದಾನೆ.
ತಲ್ವಾರ್ ಹಿಡಿದು ಓಡಾಡಿದ ಯುವಕನನ್ನು ಸ್ಥಳೀಯ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿ ಬಂದಿತ್ತು.
ಇತ್ತೀಚೆಗೆ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕುರಿತ ಬ್ಯಾನರ್ ಅಳವಡಿಸಿಲು ಕನಕಮಜಲು ಪೇಟೆಯಲ್ಲಿ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಈತ ತಲವಾರು ಹಿಡಿದು ರಸ್ತೆಯಲ್ಲಿ ನಡೆದಾಡುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಕನಕಮಜಲು ಗ್ರಾಮ ಪಂಚಾಯಿತಿ ಅವರನ್ನು ಸಂಪರ್ಕಿಸಿದಾಗ, ' ಪ್ಲೆಕ್ಸ್ ಬ್ಯಾನರ್ ಅಳವಡಿಸುವ ವಿಷಯವಾಗಿ ಅನುಮತಿಗಾಗಿ ನಮ್ಮಲ್ಲಿಗೆ ಯಾರೂ ಬಂದಿಲ್ಲ. ಬಟ್ಟೆ ಬ್ಯಾನರ್ ಹಾಕಲು ನಾವು ಈಗಾಗಲೇ ಅನುಮತಿ ನೀಡಿದ್ದೇವೆ' ಎಂದು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರೋಜಿನಿ ತಿಳಿಸಿದ್ದಾರೆ.
ಘಟನೆಯ ಗಂಭೀರತೆ ಅರಿತ ಪೊಲೀಸರು ಸ್ಥಳಕ್ಕೆ ತೆರಳಿ ಆತನಿಂದ ತಲವಾರು ವಶಪಡಿಸಿದ್ದಾರೆ ಎಂದು ತಿಳಿದುಬಂದಿದೆ.