ಕಾರ್ಕಳ, ಆ 10 (DaijiworldNews/MS): ಹಾರ್ಡ್ವೇರ್ ಅಂಗಡಿಯೊಂದರ ಕೆಲಸಗಾರರ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡಿ ಲಕ್ಷಾಂತರ ಮೊತ್ತದ ಹಣವನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ನ ಜೋಗ ರಸ್ತೆಯ ನಿವಾಸಿ ನೂರ(೪೭) ಪ್ರಕರಣದಲ್ಲಿ ಬಂಧಿತ ಆರೋಪಿ.
ಜೂನ್ 02ರಂದು ಮದ್ಯಾಹ್ನ ಕಾರ್ಕಳ ಬೈಪಾಸ್ ರಸ್ತೆಯಲ್ಲಿರುವ ಡಾ. ಟಿಎಂಎ ಪೈ ಆಸ್ಪತ್ರೆಯ ಮುಂಭಾಗದ ಮಂಜು ಶ್ರೀ ಕಟ್ಟಡದಲ್ಲಿದ್ದ ಧ್ವನಿ ಹಾರ್ಡವೇರ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.ಪರಿಕರ ಸಂಗ್ರಹದ ಸೋಗಿನಲ್ಲಿ ಬಂದ ತಂಡವು ಹಾರ್ಡ್ವೇರ್ ಅಂಗಡಿಯ ಕೆಲಸಗಾರನ್ನು ಅಂಗಡಿಯಿಂದ ಹೊರ ತೆರಳುವ ರೀತ್ಯಾದಲ್ಲಿ ವ್ಯವಹಾರ ನಡೆಸಿದ ಬೆನ್ನಲ್ಲೇ ಡ್ರಾಯರಿನಲ್ಲಿ ಇದ್ದ ರೂ. 1.45 ಲಕ್ಷ ನಗದು ಹಣವನ್ನು ಕಳವು ಮಾಡಿಗೈದು ಕಾರೊಂದರಲ್ಲಿ ಪರಾರಿಯಾಗಿದ್ದರು.
ಆರೋಪಿಗಳು ಕೃತ್ಯದ ಸಮಯ ಉಪಯೋಗಿಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳಾದ ಇಬ್ರಾಹಿಂ ಕಾರ್ಗಲ್, ಮಹಮ್ಮದ್ ಇಕ್ಬಾಲ್ ಹಾಸನ ರವರುಗಳು ತಲೆಮರೆಸಿಕೊಂಡಿರುತ್ತಾರೆ.
ಕಾರ್ಕಳ ಉಪ-ವಿಭಾಗದ ಡಿ ವೈ ಎಸ್ ಪಿ ವಿಜಯಪ್ರಸಾದ್, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್ರವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪಿ ಎಸ್ ಐ ಪ್ರಸನ್ನ ಕುಮಾರ್ ಮತ್ತು ತನಿಖಾ ಎಸ್ ಐ ದಾಮೋದರ್ ರವರ ಆದೇಶದಂತೆ ಕಾರ್ಕಳ ನಗರ ಠಾಣಾ ಎ ಎಸ್ ಐ ರಾಜೇಶ್ ಪಿ, ಪಿ ಸಿ ಘನಶ್ಯಾಮ್, ಸಿದ್ಧರಾಯ ಮತ್ತು ಆನಂದ ರವರು ಆರೋಪಿಯನ್ನು ಬಂಧಿಸಿದ್ದಾರೆ.