ಬೈಂದೂರು, ಆ 09 (DaijiworldNews/MS): ಬೈಂದೂರಿನ ಕಲ್ತೋಡು ಎಂಬಲ್ಲಿ ಸೋಮವಾರ ಕಾಲುಸಂಕದಿಂದ ಹೊಳೆಗೆ ಬಿದ್ದು ನದಿಯಲ್ಲಿ ನೀರುಪಾಲಾದ ಏಳು ವರ್ಷದ ವಿದ್ಯಾರ್ಥಿನಿ ಸನ್ನಿಧಿಗಾಗಿ ಮಂಗಳವಾರವೂ ಶೋಧ ಕಾರ್ಯ ಮುಂದುವರಿದಿದೆ.
ಬಾಲಕಿ ಸನ್ನಿಧಿ ಶಾಲೆಯಿಂದ ವಾಪಸಾಗುತ್ತಿದ್ದಾಗ ಕಾಲ್ತೋಡು ಗ್ರಾಮದ ಬೋಳಂಬಳ್ಳಿಯ ಬೀಜಮಕ್ಕಿ ಎಂಬಲ್ಲಿದ್ದ ಕಾಲುಸಂಕ ಜಾರಿ ಕೆಳಗಿರುವ ಹೊಳೆಗೆ ಬಿದ್ದಿದ್ದಳು.
ಬಾಲಕಿಗಾಗಿ ನಿನ್ನೆಯಿಂದ ಅಗ್ನಿಶಾಮಕ ದಳ, ಈಜುಗಾರರು ಹಾಗೂ ಸ್ಥಳೀಯರು ವ್ಯಾಪಾಕ ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಜಿಲ್ಲಾಧಿಕಾರಿ ಕೂರ್ಮಾರಾವ್ ಭೇಟಿ ನೀಡಿದ್ದಾರೆ. ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು, ತಹಶೀಲ್ದಾರ್ ಕಿರಣ್ ಗೌರಯ್ಯ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಬಾಲಕಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.