ಮಂಗಳೂರು, ಆ 09 (DaijiworldNews/HR): 1994ರಲ್ಲಿ ವಾಮಂಜೂರಿನಲ್ಲಿ ತನ್ನ ಚಿಕ್ಕಮ್ಮ ಸೇರಿದಂತೆ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರವೀಣ್ ಕುಮಾರ್ ಅವರನ್ನು ಕೇಂದ್ರ ಕಾರಾಗೃಹದಿಂದ ಕ್ಷಮಾಧಾನದ ಆಧಾರದ ಮೇಲೆ ಬಿಡುಗಡೆ ಮಾಡುವುದಕ್ಕೆ ಕುಟುಂಬಸ್ಥರು ವಿರೋಧಿಸಿದ್ದಾರೆ.
ಪ್ರವೀಣ್ ಕುಮಾರ್
1994ರ ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ(75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಅವರದ್ದೇ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಪ್ರವೀಣ್ ಬರ್ಬರವಾಗಿ ಕೊಲೆ ಮಾಡಿ ನಗದು, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ.
ನಾಲ್ಕು ಕೊಲೆಗಳ ಅಪರಾಧಿ ವಾಮಂಜೂರು ಪ್ರವೀಣನ ಬಿಡುಗಡೆ ಸಂಬಂಧಿಸಿದಂತೆ, ಜಿಲ್ಲಾಡಳಿತ ವತಿಯಿಂದ ಆಕ್ಷೇಪಣೆ ಸಲ್ಲಿಸಲು ಪತ್ನಿ ಸೇರಿದಂತೆ ಕುಟುಂಬಸ್ಥರು ಕಮೀಷನರ್ ಕಚೇರಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಭೇಟಿ ನೀಡುತ್ತಿದ್ದು, ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನ್ಯಾಯಾಲಯ ಪ್ರವೀಣ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆತನನ್ನು ಬಿಡುಗಡೆ ಮಾಡಬಾರದು ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ನಮ್ಮನ್ನು ಸಂಪರ್ಕಿಸಿದರು. ಇದನ್ನು ಸರಕಾರ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಪ್ರವೀಣ್ ಜೈಲಿನಿಂದ ಹೊರಗೆ ಬಂದರೆ ಆತನಿಂದ ಜೀವ ಬೆದರಿಕೆ ಇದೆ ಎಂದು ಪ್ರವೀಣ್ ಪತ್ನಿ ಹೇಳಿಕೆ ನೀಡಿದ್ದಾಳೆ.
ಪ್ರವೀಣ್ ಸಹೋದರ ಪ್ರಶಾಂತ್ ದೈಜಿವರ್ಲ್ಡ್ ಜೊತೆ ಮಾತನಾಡಿ, "ಚಿನ್ನಕ್ಕಾಗಿ ಇಂತಹ ಅಪರಾಧ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸುದ್ದಿ ಕೇಳಿ ನಾವು ಆಘಾತಕ್ಕೊಳಗಾಗಿದ್ದೇವೆ ಎಂದರು.
ಅಪ್ಪಿ ಶೇರಿಗಾರ್ತಿ ಅವರ ಮೊಮ್ಮಗಳು ಮೇದಾ ಮಾತನಾಡಿ, ಘೋರ ಅಪರಾಧ ಎಸಗಿರುವ ಆರೋಪಿಯನ್ನು ಬಿಡುಗಡೆ ಮಾಡಬಾರದು ಎಂದಿದ್ದಾರೆ.