ಬೈಂದೂರು, ಆ 09 (DaijiworldNews/MS): ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿಹೋಗಿದ್ದ ಶಾಲಾ ವಿದ್ಯಾರ್ಥಿನಿ ಸನ್ನಿಧಿ (7) ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಇಂದು ಭೇಟಿ ನೀಡಿದರು.
ಮಕ್ಕಳಿಗೆ ಹೊಳೆ, ತೊರೆ ದಾಟಿ ಹೋಗಲು ಬಹಳ ಕಷ್ಟವಾಗುತ್ತಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ. ಊರಿನ ಸಮಸ್ಯೆಗಳನ್ನು ಕಾಲ್ತೋಡು ಗ್ರಾಮಸ್ಥರು ಡಿಸಿ ಮುಂದೆ ಹೇಳಿಕೊಂಡರು.
ಡಿಸಿ ಕೂರ್ಮಾರಾವ್ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದರು ಅಲ್ಲದೆ ವಿಪತ್ತು ನಿರ್ವಹಣಾ ದಳದವರಿಗೆ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಿದರು.
ಘಟನೆ ನಡೆದ ಕಾಲ್ತೋಡು ಕಾಲು ಸೇತುವೆ ಸ್ಥಳದಲ್ಲಿ ಕಿರು ಸೇತುವೆ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಇದೆ ಹೊಳೆಗೆ 5 ಕಡೆ ಕಾಲು ಸಂಕವಿದ್ದು, ವಾಂಟೆಮನೆ ಕಾಲುಸಂಕ ನಿರ್ಮಾಣಕ್ಕೆ ಹತ್ತು ಲಕ್ಷ ಅನುಮೋದನೆ ಸಿಕ್ಕಿದ್ದು ಕೂಡಲೇ ಕಿರು ಸಂಕ ನಿರ್ಮಿಸಲು ಸೂಚನೆ ನೀಡಿದ್ದೇನೆ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಇದೇ ವರ್ಷ ಜನವರಿಯಲ್ಲಿ, ಕಾಲ್ತೊಡಿನ ಊರುಗಳಾದ ಕಪ್ಪಾಡಿ, ಕಂಪ, ಮಣ್ಮನೆ, ಮಧುಕೋಡು, ಮೂರೂರು, ಗುಂಡ್ವಾಣ, ಚಪ್ಪರಿಕೆ, ಬೀಜಮಕ್ಕಿ, ಅರಗುಂಡಿ ಪ್ರದೇಶದ ರಸ್ತೆಗಳು ಸಂಪೂರ್ಣ ಜಖಂಗೊಂಡಿದ್ದು ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಹಾಗೂ ಕೃಷಿಕರಿಗೆ ಜಮೀನುಗಳಿಗೆ ಹೋಗಲು ಮಳೆಗಾಲದಲ್ಲಿ ತುಂಬಾ ಕಷ್ಟವಾಗುತ್ತಿದ್ದು, ಸುಮಾರು ಹದಿನೈದು ಕಾಲುಸಂಕಗಳ ಅಗತ್ಯವಿದ್ದು ಈ ಮೇಲ್ಕಂಡ ಎಲ್ಲಾ ವಿಷಯಗಳನ್ನು ಗಮನಿಸಿ ನಮ್ಮ ಊರಿನ ಜನರ ಸಮಸ್ಯೆಗಳನ್ನು ಪರಿಹರಿಸಬೇಕಾಗಿ ಬೈಂದೂರು ಶಾಸಕರಲ್ಲಿ ವಿನಂತಿಸಿ ಕೊಂಡಿದ್ದರು.
ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಪೊಲೀಸ್ ಇಲಾಖೆ ಉಪಸ್ಥಿತರಿದ್ದರು.