ಪುತ್ತೂರು, ಆ 08 (DaijiworldNews/SM): ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 7ರಂದು ಬಂಧನಕ್ಕೊಳಗಾಗಿದ್ದ ಮತ್ತಿಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪುತ್ತೂರು ಡಿವೈಎಸ್ ಪಿ ಡಾ. ಪಿ ಗಾನಾ ಕುಮಾರ್ ಅವರ ನೇತೃತ್ವದಲ್ಲಿ ಇಂದು ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿಗಳಾದ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್ ಮತ್ತು ಸುಳ್ಯ ನಾವೂರು ನಿವಾಸಿ ಆಬಿದ್ ಎಂಬವರನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.
ರವಿವಾರದಂದು ಬಂಧಿಸಲಾಗಿರುವ ಆರೋಪಿಗಳನ್ನು ಸೋಮವಾರದಂದು ಸುಳ್ಯ ಮತ್ತು ಬೆಳ್ಳಾರೆಯ ಎಸ್ ಡಿ ಪಿ ಐ ಕಚೇರಿಗೆ ಹಾಗೂ ಸುಳ್ಯ ಮತ್ತು ಬೆಳ್ಳಾರೆಯ ಕೆಲವು ಕಡೆಗಳಲ್ಲಿ ಮಹಜರು ನಡೆಸಿ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ಕಿರಿಯ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾರವರು ಆರೋಪಿಗಳಿಗೆ ಇಂದಿನಿಂದ ಆಗಸ್ಟ್ 12 ರವರೆಗೆ ನಾಲ್ಕು ದಿನಗಳ ನ್ಯಾಯಾಂಗ ಬಂಧನ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ.