ಸುಳ್ಯ, ಆ 08 (DaijiworldNews/SM): ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಪೊಲೀಸರು ನಿನ್ನೆ ಇಬ್ಬರನ್ನು ಬಂಧಿಸಿದ್ದು ಸುಳ್ಯ ಎಸ್ ಡಿಪಿಐ ಕಚೇರಿಗೆ ಕರೆದುಕೊಂಡು ಬಂದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರೋ ಕಚೇರಿಗೆ ಇಂದು ಬೆಳಿಗ್ಗೆ ಕರೆದುಕೊಂಡು ಹೋಗಿ ಸುಳ್ಯ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದರು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ಪೊಲೀಸ್ ತಂಡ ಈ ಇಬ್ಬರನ್ನು ಸುಳ್ಯದ ಆಲೆಟ್ಟಿ ಕ್ರಾಸ್ ನಲ್ಲಿರುವ ಎಸ್.ಡಿ.ಪಿ.ಐ. ಕಚೇರಿಗೆ ಕರೆತಂದರು.
ಸುಳ್ಯ ತಾಲೂಕಿನ ನಾವೂರು ಗ್ರಾಮದ ಮಹಮ್ಮಾಯಿ ದೇವಸ್ಥಾನದ ಬಳಿಯ ನಿವಾಸಿ ಯಾಕೂಬ್ ಎಂಬವರ ಪುತ್ರ ಅಬೀದ್(22) ಹಾಗೂ ಬೆಳ್ಳಾರೆ ಠಾಣಾ ವ್ಯಾಪ್ತಿಯ ಗೌರಿಹೊಳೆ ಬಳಿಯ ನಿವಾಸಿ ಮಹಮ್ಮದ್ ಎಂಬವರ ಪುತ್ರ ನೌಫಾಲ್(28) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿಗಳಿಬ್ಬರು ಹತ್ಯೆಯಾದ ಪ್ರವೀಣ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಹಾಗೂ ಹತ್ಯೆಯ ಯೋಜನೆ ರೂಪಿಸುತ್ತಿದ್ದ ತಂಡದ ಭಾಗವಾಗಿದ್ದರು. ಅವರನ್ನು ಇನ್ನಷ್ಟು ತನಿಖೆಗೆ ಒಳಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ಎಸ್ಪಿ ಋಷಿಕೇಶ್ ಸೋನಾವಣೆಯವರು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು .