ಹಾಸನ,ಜ 30 (MSP): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಪಕ್ಷದ ಕೆಲಸಕ್ಕೆ ಸರ್ಕಾರಿ ಕಾರು ಬಳಸಿದ್ದಾರೆ. ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ, ಸರ್ಕಾರಿ ಕಾರು ಬಳಕೆ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
‘ಪ್ರಜ್ವಲ್ ಪ್ರಯಾಣಿಸುತ್ತಿದ್ದ ಕಾರು ದಿಢೀರ್ ಕೆಟ್ಟಿದ್ದರಿಂದ, ಅನಿವಾರ್ಯವಾಗಿ ಅಧಿಕಾರಿಗಳ ಕಾರು ಬಳಕೆ ಮಾಡಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ’ ಎಂದು ಜೆಡಿಎಸ್ ವಕ್ತಾರ ರಘು ಹೊಂಗೆರೆ ಸ್ಪಷ್ಟಪಡಿಸಿದರು.
ಪ್ರಜ್ವಲ್ ಸಭೆ ನಡೆಸಿದ ಕಡೆಗಳಲ್ಲಿ ಕೆಎ-01, ಜಿಎ-8009 ಸಂಖ್ಯೆಯ ಸರ್ಕಾರಿ ಕಾರಿನಲ್ಲೇ ಓಡಾಡಿದ್ದಾರೆ. ‘ನಾನು ಜನರ ಸಮಸ್ಯೆ ಆಲಿಸಲು ಸಭೆ ಮಾಡುತ್ತಿದ್ದೇನೆ. ಚುನಾವಣೆಗಾಗಿ ಅಲ್ಲ’ ಎಂದು ಪ್ರಜ್ವಲ್ ಹೇಳಿದರು.