ಬ್ರಹ್ಮಾವರ, ಆ 08 (DaijiworldNews/MS): ಸಮಾಜದಲ್ಲಿ ಶಾಂತಿಯನ್ನು ಹಾಳುಗಡೆವಿ ಅವಾಂತರಗಳಿಗೆ ಕಾರಣವಾಗಿರುವ ಮೂಲಭೂತ ಶಕ್ತಿಗಳ ವಿರುದ್ಧ ಗಟ್ಟಿಯಾಗಿ ಮಾತನಾಡುವ ಏಕೈಕ ಧ್ವನಿ ಅಂದರೆ ಸಿದ್ಧರಾಮಯ್ಯ. ಆದ್ದರಿಂದ ಸಿದ್ಧರಾಮಯ್ಯ ಅವರ ಧ್ವನಿ ಬೇರೆ ಎಲ್ಲ ಕಡೆಗಳಿಗಿಂತ ಕರಾವಳಿ, ಮಲೆನಾಡು ಪ್ರದೇಶಗಳಿಗೆ ಹೆಚ್ಚು ಅಗತ್ಯವಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.
ಅವರು ಭಾನುವಾರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಮೃತ ಮಹೋತ್ಸವದ ಪ್ರಯುಕ್ತ ಬ್ರಹ್ಮಾವರದ ಬಂಟರ ಭವನದಲ್ಲಿ ಆಯೋಜಿಸಲಾದ ಜನನಾಯಕ ಸಿದ್ಧರಾಮಯ್ಯ-75 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಮುಖ್ಯಮಂತ್ರಿಯಾಗಿದ್ದಾಗ ಸಿದ್ಧರಾಮಯ್ಯನವರು ಎಂದಿಗೂ ಸಣ್ಣತನದ ರಾಜಕಾರಣ ಮಾಡಿಲ್ಲ. ವಿರೋಧ ಪಕ್ಷದವರಿಗೂ ತಾರತಮ್ಯ ಎಸಗಿಲ್ಲ. ಎಲ್ಲಾ ಕ್ಷೇತ್ರದ ಶಾಸಕರಿಗೆ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ರಾಜಕಾರಣ ಅವರಲ್ಲಿತ್ತು. ಅಧಿಕಾರಕ್ಕೆ ತನ್ನ ನಿಲುವುನಲ್ಲಿ ರಾಜಿಯಾಗಿಲ್ಲ, ಅದನ್ನು ಮಾರಿಕೊಂಡಿಲ್ಲ. ಸಿದ್ಧರಾಮಯ್ಯ ಎಲ್ಲ ರಾಜಕಾರಣಿಗಳಿಂದ ವಿಭಿನ್ನ ಹಾಗೂ ವಿಶೇಷವಾಗಿ ಕಾಣಲು ಅವರ ವೈಚಾರಿಕ ಸ್ಪಷ್ಟತೆ, ತಾತ್ವಿಕ ಬದ್ಧತೆ ಎಂದಿಗೂ ಬದಲಾಗದೆ ಇರುವುದು ಕಾರಣ ಎಂದರು.
ಅಹಿಂದ ಸಮುದಾಯ ಇಂದಿಗೂ ಸಿದ್ಧರಾಮಯ್ಯ ಅವರಲ್ಲಿ ಆಸೆ ಭರವಸೆಯನ್ನು ಇಟ್ಟುಕೊಂಡಿದೆ. ಇವರು ಸಾಮಾಜಿಕ ನ್ಯಾಯದ ಪರಿರಕಲ್ಪನೆಯನ್ನು ಓಟು ಬ್ಯಾಂಕಿಗಾಗಿ, ಮತ ಸೆಳೆಯುವಾಗ ತಂತ್ರವಾಗಿ ಮಾಡಿಕೊಂಡಿಲ್ಲ ಎಂಬುದು ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಬಳಿಕ ಸಾಬೀತು ಪಡಿಸಿದ್ದಾರೆ ಎಂದರು.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿದರು.
ಅಧ್ಯಕ್ಷತೆಯನ್ನು ಶಿವಮೊಗ್ಗದ ಲೇಖಕ, ಪತ್ರಕರ್ತ ಬಿ.ಚಂದ್ರೇಗೌಡ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ನಿರಂಜನ್ ಹೆಗ್ಡೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಕೆಥೋಲಿಕ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಲೇರಿಯನ್ ಮೆನೇಜಸ್, ಸಾಮಾಜಿಕ ಹೋರಾಟ ಗಾರ್ತಿ ಗೌರಿ ಕೆಂಜೂರು, ಸಾಸ್ತಾನ ಸಿಎ ಸೊಸೈಟಿ ಅಧ್ಯಕ್ಷ ಶ್ರೀಧರ್ ಪಿ.ಎಸ್., ಬೈಂದೂರು ಅಂಜಲಿ ಆಸ್ಪತ್ರೆಯ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ವಕೀಲ ಮಂಜುನಾಥ್ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಶಿಧರ್ ಹೆಮ್ಮಾಡಿ ವಂದಿಸಿದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ತಂಡದಿಂದ ದೇಶ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.