ಕುಂದಾಪುರ, ಜ 30(MSP): ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ಹೇಳಿಕೆಗೆ ಕೆಂಡಮಂಡಲರಾದ ಸದಸ್ಯರಿಂದ ವೈದ್ಯಾಧಿಕಾರಿಯ ಮೇಲೆ ಕ್ರಮಕ್ಕೆ ಪಟ್ಟು, ಮತ್ತೆ ಸದಸ್ಯರನ್ನು ಕೆರಳಿಸಿದ ಪದ ಪ್ರಯೋಗದಿಂದ ಹೊರನಡೆದ ವೈದ್ಯಾಧಿಕಾರಿ, ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡಿದ ಫಲಾನುಭವಿಗಳಿಗೆ ತೋಟಗಾರಿಕಾ ಇಲಾಖೆಯಿಂದ ಹಣ ಪಾವತಿಯಾಗದ ಬಗ್ಗೆ ಅಕ್ರೋಶಿತರಾದ ಸದಸ್ಯರಿಂದ ಸದನದ ಬಾವಿಯಲ್ಲಿ ಪ್ರತಿಭಟನೆ, ಮರುಕಳಿಸಿದ ಅಧಿಕಾರಿಗಳ ಗೈರು. ಇದು ಜ.29ರಂದು ಕುಂದಾಪುರ ತಾ.ಪಂ ಸಭಾಂಗಣದಲ್ಲಿ ನಡೆದ 15ನೇ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ಪ್ರಮುಖ ಅಂಶಗಳು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರು ಹೋದಾಗ ಅಲ್ಲಿನ ಸಿಬ್ಬಂದಿಗಳು ಸೌಜನ್ಯ ತೋರುವುದಿಲ್ಲ. ವೈದ್ಯಾಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ಕೊಡುವುದಿಲ್ಲ. ತಾ.ಪಂ.ಸಭೆಗೆ ಜಿಲ್ಲಾ ವೈದ್ಯಾಧಿಕಾರಿಗಳನ್ನು ಹಾಜರಿರುವಂತೆ ಕೋರಿದರೂ ಅವರು ಬರುವುದಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಇರಿಸಬೇಕಾದರೂ ಸ್ಪಲ್ಪ ಮಾನವೀಯತೆ ತೋರುವುದಿಲ್ಲ ಎನ್ನುವ ಸದಸ್ಯ ಮಹೇಂದ್ರ ಪೂಜಾರಿ ಅವರ ಪ್ರಶ್ನೆಗೆ ಉತ್ತರಿಸಲು ಮುಂದಾದ ತಾ|ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ರಾಬರ್ಟ್ ರೆಬೆಲ್ಲೊ ಸದಸ್ಯರು ಈ ಹಿಂದೆ ಕರ್ತವ್ಯ ನಿರತ ವ್ಯದ್ಯರ ಜೊತೆ ಕರ್ತವ್ಯಕ್ಕೆ ಅಡ್ಡಿ ತರುವ ರೀತಿ ವರ್ತಿಸಿದ್ದಾರೆ. ಆ ವೈದ್ಯರು ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸದಸ್ಯರು ಉಢಾಪೆಯಾಗಿ ವರ್ತಿಸಿದ್ದಾರೆ ಎಂದು ಹೇಳಿದಾಗ ಬಹುತೇಕ ಸದಸ್ಯರು ವೈದ್ಯಾಧಕಾರಿಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ಪ್ರಕರಣ ನಡೆದು ಒಂದು ತಿಂಗಳ ನಂತರ ಉದ್ದೇಶಪೂರ್ವಕವಾಗಿ ದೂರು ದಾಖಲಿಸಲಾಗುತ್ತಿದೆ. ಅನಗತ್ಯವಾಗಿ ಜಾತಿ ನಿಂದನೆಯ ಆರೋಪ ಮಾಡುತ್ತಿರುವುದು ಸರಿಯಲ್ಲ. ಜನರಿಂದ ಚುನಾಯಿತ ತಾ.ಪಂಸದಸ್ಯರ ಜಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ವೈದ್ಯಾಧಿಕಾರಿಗಳು ಬೇಷರತ್ ಕ್ಷಮೆ ಕೇಳಬೇಕು ಎಂದು ಸದಸ್ಯರಾದ ಕರುಣ್ ಪೂಜಾರಿ, ವಾಸುದೇವ ಪೈ, ಜಗದೀಶ ದೇವಾಡಿಗ, ಉಮೇಶ ಶೆಟ್ಟಿ ಮೊದಲಾದವರು ಗಟ್ಟಿ ಧ್ವನಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು.
ವೈದ್ಯಾಧಿಕಾರಿಗಳು ತನ್ನ ಹೇಳಿಕೆಯನ್ನು ಸಮರ್ಥಿಸಲು ಮುಂದಾಗುತ್ತಿದ್ದಂತೆ ಮತ್ತೆ ಸದಸ್ಯರ ಆಕ್ರೋಶ ಮುಗಿಲು ಮುಟ್ಟಿತ್ತು. ಸದನದ ಎದುರು ಬಂದು ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು. ಜನಪ್ರತಿನಿಧಿಗಳಿಗೆ ಇವತ್ತು ಅಧಿಕಾರಿಗಳು ಅಗೌರವವಾಗುತ್ತಿದೆ. ವೈದ್ಯರು ತಕ್ಷಣ ಹೊರ ಹೋಗಬೇಕು. ಇಲ್ಲದಿದ್ದರೆ ನಾವೇ ಹೊರ ಹೋಗುತ್ತೇವೆ ಎಂದು ಪಟ್ಟು ಹಿಡಿದರು. ಆಗ ಸದಸ್ಯ ಪುಷ್ಪರಾಜ ಶೆಟ್ಟಿ ಮಾತನಾಡಿ ತಾ.ಪಂ ಸದಸ್ಯರಿಗೆ ಸಭೆಯಲ್ಲಿ ಅವಹೇಳನಕಾರಿಯಾಗಿ ಪದ ಪ್ರಯೋಗ ಮಾಡಿದ್ದಕ್ಕೆ ಪಂಚಾಯತ್ ರಾಜ್ ಕಾಯಿದೆಯಲ್ಲಿ ಯಾವ ಕ್ರಮ ಇದೆ. ಅದೇ ಕಲಂನಡಿ ಕ್ರಮ ಕೈಗೊಳ್ಳಿ. ಇದು ಪುನರಾವರ್ತಿಸುವುದು ಬೇಡ ಎಂದರು. ಸಭೆ ಮುಂದುವರಿಯಬೇಕಾದರೆ ವ್ಯದ್ಯಾಧಿಕಾರಿಗಳು ಬೇಷರತ್ ಕ್ಷಮೆ ಕೇಳಬೇಕು ಇಲ್ಲ ಕಾಯಿದೆ ಪ್ರಕಾರ ಕ್ರಮ ಆಗಬೇಕು ಎಂದು ಸದಸ್ಯರು ಒತ್ತಾಯ ಮಾಡಲಾರಂಭಿಸಿದರು. ಆಗ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಕೂಡಾ ವೈದ್ಯಾಧಿಕಾರಿಗಳ ಮಾತಿಗೆ ವಿಷಾಧ ವ್ಯಕ್ತಪಡಿಸಿದರು. ಅಧ್ಯಕ್ಷರು ವೈದ್ಯಾಧಿಕಾರಿಯಲ್ಲಿ ಕ್ಷಮೆ ಕೇಳುವಂತೆ ಸೂಚಿಸಿದರು. ಕೊನೆಗೂ ಸದಸ್ಯರ ಗದ್ದಲದ ನಡುವೆ ವೈದ್ಯಾಧಿಕಾರಿಗಳು ಕ್ಷಮೆ ಕೇಳಿದರು.