ಉಡುಪಿ, ಆ 07 (DaijiworldNews/DB): ದೇಶಕ್ಕಾಗಿ ಪದಕ ಗಳಿಸಿರುವುದಕ್ಕೆ ಖುಷಿ ಮತ್ತು ಹೆಮ್ಮೆಯಾಗುತ್ತಿದೆ ಎಂದು ಕಾಮನ್ವೆಲ್ತ್ ಕ್ರೀಡಾಕೂಟದ 61 ಕೆಜಿ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತ ಕುಂದಾಪುರದ ಗುರುರಾಜ್ ಪೂಜಾರಿ ಹೇಳಿದ್ದಾರೆ.
ಪದಕ ಗೆದ್ದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಅವರು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು, ಶಾಸಕ ಉಮಾನಾಥ್ ಕೋಟ್ಯಾನ್ ಮುಂತಾದವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ನನ್ನನ್ನು ಬರಮಾಡಿಕೊಂಡರು. ದೇಶಕ್ಕಾಗಿ ಪದಕ ಗಳಿಸಿರುವುದು ನನಗೆ ಖುಷಿ ನೀಡಿದೆ ಎಂದರು.
ಏನೇ ಸಾಧನೆ ಮಾಡಬೇಕಿದ್ದರೂ ಸಮರ್ಪಣಾ ಮನೋಭಾವ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನ ತೀರಾ ಅಗತ್ಯ. 14-15 ವರ್ಷ ವಯಸ್ಸಿನಲ್ಲೇ ನಿಮ್ಮ ಆಸಕ್ತಿಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಸಾಧನೆಗೆ ಹೆಚ್ಚು ಗಮನ ಹರಿಸಿ. ಆ ನಿರ್ದಷ್ಟ ಕ್ರೀಡೆಯಲ್ಲಿ ಹೆಚ್ಚು ಪಳಗಲು ಉತ್ತಮ ತರಬೇತಿಯನ್ನೂ ಪಡೆದುಕೊಳ್ಳಿ ಎಂದು ಗ್ರಾಮೀಣ ಪ್ರತಿಭೆಗಳಿಗೆ ಇದೇ ವೇಳೆ ಅವರು ಸಲಹೆ ನೀಡಿದರು.
ಭಾರತದ ಎಲ್ಲಾ ಕ್ರೀಡಾಪಟುಗಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಈ ಬಾರಿ ಹೆಚ್ಚಿನ ಪದಕಗಳು ಭಾರತಕ್ಕೆ ಸಿಗಬಹುದೆಂಬ ವಿಶ್ವಾಸವಿದೆ. ಅಲ್ಲದೆ ರ್ಯಾಂಕಿಂಗ್ನಲ್ಲಿಯೂ ಉನ್ನತ ಸಾಧನೆ ಭಾರತದ್ದಾಗಬಹುದು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.