ಮಂಗಳೂರು,ಜ 30 (MSP): ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ವಾರದಲ್ಲಿ ಮೂರು ದಿನ ರಾತ್ರಿ ಪ್ರಯಾಣಿಸುವ ಹೊಸ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೇ ತೀರ್ಮಾನಿಸಿದೆ . ಹೀಗಾಗಿ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾದಲ್ಲಿ ಕರಾವಳಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಕೆಲವೇ ದಿನದಲ್ಲಿ ಹೊಸ ರೈಲು ಸಂಚಾರ ಆರಂಭಗೊಳ್ಳಲಿದ್ದು, ಈಗ ಇದಕ್ಕೆ ಅಗತ್ಯವಿರುವ ಪೂರಕ ಸಿದ್ದತೆ ಹಾಗೂ ತಾಂತ್ರಿಕ ಅನುಮತಿ ಪ್ರಕ್ರಿಯೆ ನಡೆಯುತ್ತಿದೆ.
ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುವ ನೂತನ ರೈಲು ಮಾರ್ಚ್ನ ನಂತರ ಮಂಗಳೂರು-ಬೆಂಗಳೂರು ಮಧ್ಯೆ ಪ್ರತೀದಿನ ರಾತ್ರಿವೇಳೆ ಸಂಚರಿಸುವ ನಿರೀಕ್ಷೆಯಿದೆ.
ಪ್ರಸುತ ನಿಗದಿಪಡಿಸಿರುವ ವೇಳಾಪಟ್ಟಿ ಪ್ರಕಾರ ಇದು ಪ್ರತೀ ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ಸಂಜೆ 4.30ಕ್ಕೆ ಯಶವಂತಪುರದಿಂದ ಹೊರಡಲಿದೆ. ಶನಿವಾರ, ಸೋಮವಾರ ಹಾಗೂ ಬುಧವಾರದಂದು ಬೆಳಿಗ್ಗೆ 4ಗಂಟೆಗೆ ಮಂಗಳೂರು ಸೆಂಟ್ರಲ್ಗೆ ಬರಲಿದೆ. ಶನಿವಾರ, ಸೋಮವಾರ ಹಾಗೂ ಬುಧವಾರ ಮಂಗಳೂರು ಸೆಂಟ್ರಲ್ನಿಂದ ರಾತ್ರಿ 7 ಗಂಟೆಗೆ ಹೊರಡುವ ಈ ಎಕ್ಸ್ಪ್ರೆಸ್ ರೈಲು ಭಾನುವಾರ, ಮಂಗಳವಾರ ಹಾಗೂ ಗುರುವಾರ ಮುಂಜಾನೆ 4.30ಕ್ಕೆ ಯಶವಂತಪುರ ತಲುಪುವಂತೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ರೈಲು ಮುಂಜಾನೆ ಬೇಗನೇ ಬೆಂಗಳೂರು ತಲುಪುವುದರಿಂದ ಕಚೇರಿ ವ್ಯವಹಾರಕ್ಕೆ ತೆರಳುವವರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಇದೆ. ಪ್ರಸ್ತುತ ಸಂಚರಿಸುತ್ತಿರುವ ರೈಲು ರಾತ್ರಿ 8.55ಕ್ಕೆ ಮಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ ಸುಮಾರು 7.30ಕ್ಕೆ ತಲುಪುತ್ತಿದೆ.