ಕಾಪು, ಆ 06 (DaijiworldNews/MS): ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಮಂಗಳೂರು ಬಜ್ಪೆ ಕಳವಾರ ಕುರ್ಸುಗುಡ್ಡೆ ಮೂಲದ ತಾಳಿಪಾಡಿ ಗುತ್ತಕಾಡು ನಿವಾಸಿ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ (37), ಮಂಗಳೂರು ಕೇಂಜಾರು ಗ್ರಾಮದ ಅಡ್ಮೈಗುಡ್ಡೆಯ ಮಹಮ್ಮದ್ ಮುನೀರ್ (24) ಹಾಗೂ ಕುರ್ಸುಗುಡ್ಡೆಯ ಅಕ್ಬರ್(36) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಎರಡೂವರೆ ಪವನ್ ತೂಕದ ಚಿನ್ನದ ಸರ, ಮೊಬೈಲ್ ಪೋನ್, 61 ಸಾವಿರ ರೂ. ನಗದು, ಕಳವು ಮಾಡಿದ 3 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ-1, ಮೋಟಾರು ಸೈಕಲ್ -1 ಹಾಗೂ ಇತರ ಸೊತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,99,190 ರೂ. ಎಂದು ಅಂದಾಜಿಸಲಾಗಿದೆ.
ಬಂಧಿತರ ಪೈಕಿ ಮಹಮ್ಮದ್ ಆರೀಫ್ ಬ್ರಹ್ಮಾವರ, ಮುಲ್ಕಿ, ಬಜ್ಪೆ, ಮಂಗಳೂರು ಗ್ರಾಮಾಂತರ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯ 5 ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ಒಟ್ಟು 18 ಪ್ರಕರಣಗಳು ದಾಖಲಾಗಿವೆ. ಮಹಮ್ಮದ್ ಮುನೀರ್ ಬ್ರಹ್ಮಾವರ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯ 2 ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು ಈತನ ವಿರುದ್ಧ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಅಕ್ಬರ್ ವಿರುದ್ಧ ಒಟ್ಟು 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಪು ಪೊಲೀಸ್ ಸರ್ಕಲ್ ವ್ಯಾಪ್ತಿಯ ನಂದಿಕೂರು ಯುಪಿಸಿಎಲ್ ಬಳಿಯ ಮನೆಯಲ್ಲಿದ್ದ ವೃದ್ದೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ ಪಣಿಯೂರು ಹೋಗುವ ದಾರಿಯಲ್ಲಿರುವ ಮನೆಯೊಂದರಿಂದ ಕಳವು, ಪಡುಬಿದ್ರಿ, ಉಚ್ಚಿಲ, ಕಟಪಾಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಡುಬಿದ್ರಿ ಮತ್ತು ಕಾಪು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ತಂಡ ಆರೋಪಿ ಗಳನ್ನು ಬಂಧಿಸಿದೆ.
ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ ಮತ್ತು ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ನಿರ್ದೇಶನದಂತೆ, ಕಾರ್ಕಳ ಡಿವೈಎಸ್ಪಿ ಎಸ್.ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ನೇತೃತ್ವದಲ್ಲಿ ಪಡುಬಿದ್ರಿ ಎಸ್ಸೈ ಪ್ರಕಾಶ್ ಸಾಲ್ಯಾನ್, ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್, ರಾಜೇಶ್, ಹೇಮರಾಜ್, ಸಂದೇಶ, ಸುಕುಮಾರ್ ಈ ಕಾರ್ಯಾ ಚರಣೆ ನಡೆಸಿದ್ದಾರೆ