Karavali
ಮಂಗಳೂರು: ಜಿಲ್ಲೆಯಲ್ಲಿ 6 ಲಕ್ಷ ರಾಷ್ಟ್ರ ಧ್ವಜ: ಸಡಗರದಿಂದ ಧ್ವಜರೋಹಣ ಮಾಡಿ - ಸಚಿವ ಸುನೀಲ್
- Sat, Aug 06 2022 07:28:43 PM
-
ಮಂಗಳೂರು,ಆ 06 (DaijiworldNews/MS): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಇದೇ ಆ.13 ರಿಂದ 15ರ ವರೆಗೆ ಜಿಲ್ಲೆಯ ಎಲ್ಲಾ ಮನೆಗಳು, ಅಪಾರ್ಟ್ಮೆಂಟ್ಗಳು, ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಸಂಭ್ರಮ ಹಾಗೂ ಸಡಗರದಿಂದ ದೇಶದ ತ್ರಿವರ್ಣ ಧ್ವಜರೋಹಣ ನೆರವೇರಿಸುವಂತೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಜಿಲ್ಲೆಯ ಜನತೆಗೆ ಕರೆ ನೀಡಿದರು.
ಅವರು ಆ.6ರ ಶನಿವಾರ ನಗರದ ಉರ್ವ ಸ್ಟೋರ್ಸ್ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ ಹಾಗೂ ಸ್ವಚ್ಛ ಭಾರತ ಮಿಷನ್ (ಗ್ರಾ) ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ಕಂದಾವರ ಗ್ರಾಮ ಪಂಚಾಯತ್ನ ಬೆಳಕು ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಸದಸ್ಯರು ತಯಾರಿಸಿದ ರಾಷ್ಟ್ರ ಧ್ವಜಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ಹಾಗೂ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಿಗೊಳಿಸಲು ಆ.13ರಿಂದ 15ರ ಮೂರು ದಿನ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮನೆಗಳು, ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಡಬೇಕು. ಇದನ್ನು ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬ ನಾಗರಿಕನÀ ಕರ್ತವ್ಯವಾಗಿದೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸರ್ಕಾರದ ಕಾರ್ಯಕ್ರಮವಾಗಬಾರದು, ಎಲ್ಲಾ ನಾಗರೀಕರ ಭಾಗವಹಿಸುವಿಕೆಯಿಂದ ಕಾರ್ಯಕ್ರಮಕ್ಕೆ ಮೆರಗು ಮೂಡಬೇಕು ಎಂದರು.ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಕಳೆದೊಂದು ತಿಂಗಳಿನಿಂದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ, ಅದನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆ ಜಿಲ್ಲೆಯ ನಾಗರೀಕರದ್ದಾಗಿದೆ, ಆ.8 ಮತ್ತು 9ರಂದು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ಗಳಲ್ಲಿ ಪೂರ್ವ ತಯಾರಿ ಸಭೆ ನಡೆಸಬೇಕು, ಸ್ವ-ಸಹಾಯಸಂಘ ಮತ್ತು ಯುವಕ, ಯುವತಿ ಮಂಡಲಗಳ ಮೂಲಕ ಮನೆಗಳಿಗೆ ಧ್ವಜ ತಲುಪಿಸುವ ಕೆಲಸವಾಗಬೇಕು, ಆ.10 ಮತ್ತು 11ರಂದು ಎಲ್ಲ ಮನೆಗಳಿಗೆ ಏಕಕಾಲದಲ್ಲಿ ಧ್ವಜ ವಿತರಣೆ ನಡೆಸಬೇಕು ಎಂದು ಹೇಳಿದರು.
ಹಬ್ಬದ ವಾತಾವರಣ:
ಆ.13ರಂದು ಮನೆಯ ಸದಸ್ಯರೊಂದಿಗೆ ಧ್ವಜಾರೋಹಣ ನಡೆಸಬೇಕು. ಧ್ವಜವಂದನೆ ಬಳಿಕ ಸಿಹಿ ಹಂಚಿ ಸಂಭ್ರಮಿಸಬಹುದಾಗಿದೆ, ಧ್ವಜ ಸಂಹಿತೆಯಂತೆ ಧ್ವಜಕ್ಕೆ ಅಲಂಕಾರ ಮಾಡುವಂತಿಲ್ಲ, ಯಾವುದೇ ಲೋಪವಾಗದಂತೆ, ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಸುಳ್ಯ, ಮಂಗಳೂರಲ್ಲಿ ವಿಶೇಷ ಕಾರ್ಯಕ್ರಮ:
1857ರ ಸಿಪಾಯಿ ದಂಗೆಗೂ ಮುನ್ನ ಸ್ವಾತಂತ್ರ್ಯ ಸಂಗ್ರಾಮ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಬುದು ನಮ್ಮ ಹೆಗ್ಗಳಿಕೆಯಾಗಿದೆ, 1857ಕ್ಕೂ 20 ವರ್ಷಗಳ ಮುನ್ನ ಅಂದರೆ 1837ರಲ್ಲಿ ಸುಳ್ಯದಲ್ಲಿ ಬ್ರಿಟಿಷರ ವಿರುದ್ಧ ರೈತರ ಕ್ರಾಂತಿ ನಡೆದ ಇತಿಹಾಸ ಇದೆ. ಇದುವೇ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.
ರಾಷ್ಟ್ರಧ್ವಜವನ್ನು ಉಚಿತವಾಗಿ ಕೇಳಬೇಡಿ: ಈ ಬಾರಿಯ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗವಹಿಸಲು ಎಲ್ಲರೂ ಹಣ ನೀಡಿ ತ್ರಿವರ್ಣ ಧ್ವಜ ಖರೀದಿಸಬೇಕು, ಯಾವುದೇ ಕಾರಣಕ್ಕೂ ಉಚಿತ ಧ್ವಜಕ್ಕೆ ಒತ್ತಾಯ ಮಾಡಬಾರದು. ಗ್ರಾಮೀಣ ಭಾಗದಲ್ಲಿ ಧ್ವಜ ಆರೋಹಣಕ್ಕೆ ಕಡ್ಡಿಗಳು ಸಿಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಧ್ವಜದ ಜತೆ ಕಡ್ಡಿಯನ್ನೂ ನೀಡಿದರೆ ಉತ್ತಮ. ಮಹಾನಗರ ಪಾಲಿಕೆಯವರು ಅಗತ್ಯ ಕ್ರಮವಹಿಸಬೇಕು. ಧ್ವಜವನ್ನು ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಮಾರಾಟ ಕೇಂದ್ರಗಳಿಂದ ಪಡೆಯಬಹುದು. ಮನೆ, ಕಟ್ಟಡಗಳಲ್ಲಿ ಧ್ವಜ ಆರೋಹಣದ ಪೋಟೋಗಳನ್ನು ಜಿಲ್ಲಾಡಳಿತ ನೀಡುವ ಪ್ರತ್ಯೇಕ ವಾಟ್ಸ್ ಅಪ್ ನಂಬರಿಗೆ ಕಳುಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಶಾಸಕರಾದ ವೇದವಾಸ್ ಕಾಮತ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಎಲ್ಲಾ ಸ್ವಾತಂತ್ರ್ಯ ಹೋರಾಟ ಚಳವಳಿ ಹಾಗೂ ಆಂದೋಲನಗಳು ನಮ್ಮ ಜಿಲ್ಲೆಯಲ್ಲೂ ಅತ್ತಾವರೆ ಎಲ್ಲಪ್ಪ, ಎಂ ಲೋಕಯ್ಯ ಶೆಟ್ಟಿ, ಕಾರ್ನಾಡ್ ಸದಾಶಿವ ರಾವ್, ಕೆದಂಬಾಡಿ ರಾಮಯ್ಯಗೌಡ ಮುಂತಾದ ಮಹನೀಯರ ಮುಂದಾಳತ್ವದಲ್ಲಿ ನಡೆದಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದರು.
ಈ ಮಹಾನ್ ಚೇತನಗಳಿಗೆ ಗೌರವ ಸಮರ್ಪಿಸುವ ದೃಷ್ಟಿಯಿಂದ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ಸಡಗರ ಮತ್ತು ಅರ್ಥಗರ್ಭಿತವಾಗಿ ನಡೆಯಬೇಕು, ಅದೇ ರೀತಿ ನಮ್ಮೆಲ್ಲರ ಒಟ್ಟುಗೂಡುವಿಕೆಯಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಆಚರಣೆ ಇಡೀ ದೇಶಕ್ಕೆ ಮಾದರಿಯಾಗುವಂತೆ ಆಗಲಿ ಎಂದು ಶುಭ ಹಾರೈಸಿದರು.
ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಮಾತನಾಡಿ, ರಾಷ್ಟ್ರಪ್ರೇಮವನ್ನು ನಾಗರೀಕರಲ್ಲಿ ಬಲಗೊಳಿಸುವ ಹಾಗೂ ಅದನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜಗತ್ತಿನ ಬೇರೆ ದೇಶಗಳಿಂತ ವಿಭಿನ್ನವಾಗಿ ದೇಶಾಭಿಮಾನವನ್ನು ಪಸರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ, ದಕ್ಷಿಣ ಕನ್ನಡದಲ್ಲಿ ರಾಣಿ ಅಬ್ಬಕ್ಕ ಮಾಡಿದ ಹೋರಾಟ ಚರಿತ್ರೆ ಸೇರಿದೆ ಅಂತಹ ಮಹನೀಯರ ಸಾಧನೆಯನ್ನ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯ ಸಮಸ್ತ ನಾಗರಿಕರು ಈ ರಾಷ್ಟ್ರೀಯ ಅಭಿಯಾನದೊಂದಿಗೆ ಕೈಜೋಡಿಸುವುದರೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತೆ ಕರೆ ನೀಡಿದರು.ಜಿಲ್ಲೆಯಲ್ಲಿ 6 ಲಕ್ಷ ರಾಷ್ಟ್ರ ಧ್ವಜ:
ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಕೇಂದ್ರ ಸರ್ಕಾರ ಕಳುಹಿಸಿದ ಧ್ವಜಕ್ಕೆ 22 ರೂ.ಗಳು, ರಾಜ್ಯ ಸರ್ಕಾರದ ಧ್ವಜಕ್ಕೆ 25 ರು.ಗಳು ಹಾಗೂ ಸ್ತ್ರೀಶಕ್ತಿ ಗುಂಪುಗಳು ಸಿದ್ಧಪಡಿಸಿದ ಧ್ವಜಕ್ಕೆ 30 ರೂಪಾಯಿಗಳನ್ನು ನಿಗದಿ ಪಡಿಸಲಾಗಿದೆ, ಪ್ಲಾಸ್ಟಿಕ್ ಧ್ವಜಕ್ಕೆ ಅವಕಾಶ ಇಲ್ಲ. ಕೇಂದ್ರದಿಂದ 1.75 ಲಕ್ಷ ಧ್ವಜ, ರಾಜ್ಯದಿಂದ 4.25 ಲಕ್ಷ ಧ್ವಜ ಸೇರಿ 6 ಲಕ್ಷ ಧ್ವಜ ಸಿದ್ಧವಿದೆ. ಸ್ತ್ರೀಶಕ್ತಿ ಗುಂಪುಗಳು 4.25 ಲಕ್ಷ ಧ್ವಜವನ್ನು ಸಿದ್ಧಪಡಿಸುತ್ತಿದ್ದು, ಇದನ್ನು ಜಿಲ್ಲೆಯ 16 ಕಡೆಗಳಲ್ಲಿ ಮಾರಾಟಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಸ್ವ ನಿಧಿ ಬಳಸಿ ಪ್ರತಿ ಗ್ರಾಮ ಪಂಚಾಯತ್ಗಳಿಗೆ ತಲಾ 500 ಧ್ವಜ ಖರೀದಿಗೆ ಸೂಚನೆ ನೀಡಲಾಗಿದೆ. ಅದನ್ನು ಸರ್ಕಾರದ ವಿವಿಧ ಕಚೇರಿಗಳಿಗೆ ನೀಡಬಹುದಾಗಿದೆ ಹಾಗೂ ಮಾರಾಟ ಕೇಂದ್ರದ ಮೂಲಕ ಮಾರಾಟ ಮಾಡಬಹುದಾಗಿದೆ, ರಾಜ್ಯ ಸರ್ಕಾರದಿಂದ ಬಂದ ಧ್ವಜವನ್ನು 17 ವಿವಿಧ ಇಲಾಖೆಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ಲಾಸ್ಟಿಕ್ ಧ್ವಜ ಇಲ್ಲ, ವಾಹನಕ್ಕಿಲ್ಲ ಧ್ವಜ:
ಎಲ್ಲಿಯೂ ಪ್ಲಾಸ್ಟಿಕ್ ಧ್ವಜ ಹಾರಾಟಕ್ಕೆ ಅವಕಾಶ ಇಲ್ಲ. ಅದೇ ರೀತಿ ಯಾವುದೇ ರೀತಿಯ ವಾಹನಗಳಲ್ಲೂ ಧ್ವಜ ಹಾರಾಟಕ್ಕೆ ಆಸ್ಪದ ಇಲ್ಲ. ಸರ್ಕಾರದ ನಿಯಮದಂತೆ ಅತಿ ಗಣ್ಯರ ವಾಹನಗಳಲ್ಲಿ ಮಾತ್ರ ಎದುರು ಭಾಗದಲ್ಲಿ ಧ್ವಜ ಹಾಕಬಹುದು. ಆದರೆ ವಾಹನದ ಒಳಭಾಗದಲ್ಲಿ ಸ್ಟೇರಿಂಗ್ ಎದುರು ಮಾತ್ರ ಪುಟ್ಟ ಧ್ವಜ ಹಾಕಲು ಅಡ್ಡಿ ಇಲ್ಲ. ಕೈಮಗ್ಗ, ಖಾದಿ, ರೇμÉ್ಮ, ಉಣ್ಣೆ, ಪಾಲಿಸ್ಟರ್ ಧ್ವಜ ಹಾಕಲು ಅವಕಾಶ ಇದೆ. ಇಲ್ಲಿ ಪಾಲಿಸ್ಟರ್, ಖಾದಿ, ಕಾಟನ್ ಧ್ವಜ ನೀಡಲಾಗುತ್ತಿದೆ. ರಾಷ್ಟ್ರಧ್ವಜ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಸ್ವಾತಂತ್ರ್ಯೋತ್ಸವದ ಅಮೃತೋತ್ಸವ ಸಂದರ್ಭ ರಾತ್ರಿಯೂ ಇಳಿಸದೆ ಧ್ವಜ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಕುಮಾರ್ ಮಾಹಿತಿ ನೀಡಿದರು.
ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿದರೆ ಪ್ರಕರಣ ದಾಖಲು-ಜೈಲು ಶಿಕ್ಷೆ:
ರಾಷ್ಟ್ರಧ್ವಜವನ್ನು ಎಲ್ಲರೂ ಮನೆಗಳಲ್ಲಿ ಹಾಗೂ ಕಟ್ಟಡಗಳಲ್ಲಿ ಹಾರಾಟಕ್ಕೆ ತೊಂದರೆ ಇಲ್ಲ. ಆದರೆ ಧ್ವಜಸಂಹಿತೆಯನ್ನು ಪಾಲಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಮತ್ತು ಜೈಲು ಶಿಕ್ಷೆ ಶತಸಿದ್ಧ. ಧ್ವಜ ಸಂಹಿತೆ ಪ್ರಕಾರ, ರಾಷ್ಟ್ರಧ್ವಜಕ್ಕೆ ಅಗೌರವ, ನಾಶ, ಅಪಕೀರ್ತಿ, ಹರಿದು ಹಾಕಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಇದೆ. ಇದಕ್ಕೆ ಯಾರ ಅನುಮತಿಗೆ ಕಾಯಬೇಕಾಗಿಲ್ಲ. ಯಾರೇ ನಾಗರಿಕ ದೂರು ನೀಡಿದರೂ ಸಾಕಾಗುತ್ತದೆ. ಪೆÇಲೀಸರು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಅಟ್ಟಲು ಅವಕಾಶ ಇದೆ. ಕನಿಷ್ಠ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆ.13ರಿಂದ 15ರ ವರೆಗೆ ಧ್ವಜಾರೋಹಣ ನಡೆಸಿ ಇಳಿಸಿದ ಬಳಿಕ ಧ್ವಜವನ್ನು ಎಸೆಯದೆ, ಜೋಪಾನವಾಗಿ ಮನೆಯಲ್ಲೇ ಇರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.
ಅಪಾರ್ಟ್ಮೆಂಟ್ ಹೊರತುಪಡಿಸಿ ನಗರ ಪಾಲಿಕೆ ಹಾಗೂ ಸ್ಥಳೀಯ ಆಡಳಿತಗಳಲ್ಲಿ ಒಟ್ಟು 1.60 ಲಕ್ಷ ಮನೆಗಳಿವೆ. ಗ್ರಾಮೀಣ ಭಾಗದಲ್ಲಿ 2.90 ಲಕ್ಷ ಮನೆಗಳಿದ್ದು, ಸರ್ಕಾರಿ ಕಚೇರಿ, ಇತರೆ ಕಟ್ಟಡ ಸೇರಿ ಒಟ್ಟು 4.60 ಲಕ್ಷ ಕಟ್ಟಡಗಳಿವೆ. ಸಂಜೀವಿನಿ ಒಕ್ಕೂಟದಡಿ 6 ಸಾವಿರ ಸ್ತ್ರೀಶಕ್ತಿ ಗುಂಪುಗಳಿದ್ದು, 66 ಸಾವಿರ ಸದಸ್ಯರಿದ್ದಾರೆ. ಇದರಲ್ಲಿ 256 ಸ್ತ್ರೀಶಕ್ತಿ ಗುಂಪುಗಳಿಗೆ ರಾಷ್ಟ್ರಧ್ವಜ ತಯಾರಿಕೆಗೆ ರುಡ್ಸೆಟ್ನಿಂದ ತರಬೇತಿ ನೀಡಲಾಗಿದೆ. 75 ಕಡೆಗಳಲ್ಲಿ ಸಂಜೀವಿನಿ ಒಕ್ಕೂಟ ಸದಸ್ಯರು ರಾಷ್ಟ್ರಧ್ವಜ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಥಮ ಹಂತದಲ್ಲಿ 1.50 ಲಕ್ಷ ರಾಷ್ಟ್ರಧ್ವಜ ಸಿದ್ಧವಾಗಿದ್ದು, 2ನೇ ಹಂತದಲ್ಲಿ 1 ಲಕ್ಷ ಧ್ವಜ ತಯಾರಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ಇನ್ನು ಒಂದು ವಾರದೊಳಗೆ ಜಿಲ್ಲೆಯಲ್ಲಿ ಎಲ್ಲರ ಮನೆಗಳಿಗೆ ರಾಷ್ಟ್ರಧ್ವಜವನ್ನು ತಲುಪಿಸಬೇಕು. ಧ್ವಜ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕಾಗಿದ್ದು, ಅಶಿಸ್ತಿನಿಂದ ವರ್ತಿಸುವಂತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಹರಿದ, ಕೊಳಕು ಧ್ವಜವನ್ನು ಆರೋಹಣ ಮಾಡಬಾರದು. ಸೊಂಟದ ಕೆಳಗೂ ಧ್ವಜ ಬಣ್ಣದ ವಸ್ತ್ರವನ್ನು ಧರಿಸುವಂತಿಲ್ಲ ಎಂದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ಸಹಾಯಕ ಆಯುಕ್ತ ಮದನಮೋಹನ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ವೇದಿಕೆಯಲ್ಲಿದ್ದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮತ್ತು ಮಂಗಳೂರು ನಗರ ಪಾಲಿಕೆಯ ಜನಪ್ರತಿನಿಧಿಗಳಿಗೆ ಧ್ವಜವನ್ನು ಹಸ್ತಂತರಿಸಲಾಯಿತು.