ಉಡುಪಿ, ಆ 06 (DaijiworldNews/DB): ಆಲಿಂಗನ ಸಹಜವಾಗಿರಬೇಕು. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಆಲಿಂಗನ ಪರಸ್ಪರ ಒಪ್ಪಿಗೆಯಿಂದ ಆಗಿಲ್ಲ. ಇದು ಬಲವಂತದ ಆಲಿಂಗನವಾಗಿದ್ದು, ತುಂಬಾ ದಿನ ಉಳಿಯುವುದಿಲ್ಲ ಎಂದು ಸಚಿವ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಸಿದ್ದು - ಡಿಕೆಶಿ ಆಲಿಂಗನ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಮಾಧ್ಯಮದವರಿಗೆ ಪ್ರತಿಕಿಯಿಸಿದ ಅವರು, ಸಿದ್ದು-ಡಿಕೆಶಿಯವರದ್ದು ಬಲವಂತದ ಆಲಿಂಗನ ಎಂಬುದು ಈಗಾಗಲೇ ಬಹಿರಂಗವಾಗಿದೆ. ಯಾರದ್ದೋ ಬಲವಂತದ ಆಲಿಂಗನ ತುಂಬಾ ದಿನ ಉಳಿಯುವುದಿಲ್ಲ. ಬಲವಂತದ ಆಲಿಂಗನ ಬೇಗ ಡೈವೋರ್ಸ್ ಆಗುತ್ತದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಡೈವೋರ್ಸ್ ಯಾವಾಗ ಆಗುತ್ತದೆ ಕಾದು ನೋಡಬೇಕು ಎಂದರು.
ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಪ್ರವೀಣ್ ಹಂತಕರು ಕೇರಳದವರಲ್ಲ, ಸ್ಥಳೀಯರೆಂದು ಗೃಹ ಮಂತ್ರಿಗಳು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಪೋಲಿಸ್ ಇಲಾಖೆಗೆ ಮುಕ್ತವಾದ ಅವಕಾಶ ನೀಡಲಾಗಿದ್ದು, ಈಗಾಗಲೇ ಎರಡ್ಮೂರು ಆರೋಪಿಗಳ ಬಂಧನವಾಗಿದೆ. ಒಂದೆರಡು ದಿನದಲ್ಲಿ ಪ್ರಮುಖ ಆರೋಪಿಯ ಬಂಧನವಾಗಬಹುದೆಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಉಡುಪಿಯಲ್ಲಿ 4 ಲಕ್ಷ, ದಕ್ಷಿಣ ಕನ್ನಡದಲ್ಲಿ 6 ಲಕ್ಷ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲಾಗುವುದು. ಈಗಾಗಲೇ ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ, ಸಾರ್ವಜನಿಕರ ಸಹಕಾರ ಕೋರಲಾಗಿದೆ. ಆಗಸ್ಟ್ ೯ರಿಂದ ರಾಷ್ಟ್ರದ್ವಜ ವಿತರಣೆ ನಡೆಯಲಿದೆ. ೧೩ರಂದು ಅಧಿಕೃತವಾಗಿ ಎಲ್ಲರ ಮನೆಗಳ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೆ ಸಂಭ್ರಮದಿಂದ, ಕುಟುಂಬದ ಸದಸ್ಯರೊಂದಿಗೆ ಒಟ್ಟಾಗಿ ಆಚರಿಸಿ ಎಂದು ಮನವಿ ಮಾಡಿದರು.
ಆಗಸ್ಟ್ 13ರಿಂದ ರಾಜ್ಯದ ಎಲ್ಲಾ 5 ರಂಗಾಯಣಗಳಲ್ಲಿ ಸ್ವಾತಂತ್ರ್ಯದ ನಾಟಕ ಪ್ರದರ್ಶನ ನಡೆಯಲಿದೆ. ಕೋವಿಡ್ ಸಂದರ್ಭದಲ್ಲಿ ರಂಗಾಯಣಗಳಿಗೆ ಅನುದಾನದ ಕೊರತೆಯಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಕೋರಲಾಗಿದ್ದು, ಅದಕ್ಕೆ ಆರ್ಥಿಕ ಇಲಾಖೆ ಒಪ್ಪಿದೆ ಎಂದರು.
ಬೆಂಗಳೂರು ಬಿಬಿಎಂಪಿ ಕ್ಷೇತ್ರ ವಿಂಗಡಣೆಗೆ ಕಾಂಗ್ರೆಸ್ ತಗಾದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಎಷ್ಟು ಪಾರದರ್ಶಕವಾಗಿ ಮೀಸಲಾತಿಯನ್ನು ಜಾರಿಗೆಗೊಳಿಸಿದೆ? ನಾವು ಪಾರದರ್ಶಕವಾಗಿ ಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ. ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿದ್ದೇವೆ. ಜಮೀರ್ ಅಹಮ್ಮದ್ ಅವರಿಗೆ ಆಕ್ಷೇಪ ಇದ್ದರೂ ಸಲ್ಲಿಸಲಿ. ಅವರು ಇನ್ಯಾರಿಗೋ ಬುದ್ಧಿ ಹೇಳುವಂತದ್ದು ಅಗತ್ಯ ಇಲ್ಲ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್್ಸೈಟ್ ನಲ್ಲಿ ಹರ್ ಘರ್ ತಿರಂಗಾ ಎಂಬುದನ್ನು ಹಿಂದಿಯಲ್ಲಿ ಬರೆದಿರುವುದು ವಿವಾದವಾಗಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವ ಸುನಿಲ್ಕುಮಾರ್, ಇಡೀ ದೇಶಾದ್ಯಂತ ಇದೇ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತದೆ. ಇ- ಆಡಳಿತ ವಿಭಾಗದವರು ಅದೇ ರೀತಿ ಬರೆದಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
ಬಾವುಟದ ದರದಲ್ಲಿ ಗೋಲ್ ಮಾಲ್ ಆಗಿರುವ ಆರೋಪದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಸರ್ಕಾರ ಮಾಡುವಂತದ್ದೇನಿಲ್ಲ. ನಾವು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ರಾಷ್ಟ್ರಧ್ವಜವನ್ನು ಖರೀದಿ ಮಾಡಬೇಕು ಅಂತ ನಮ್ಮೆಲ್ಲರ ಇಚ್ಛೆ ಆಗಿರುವಂತದ್ದು. ಆದಷ್ಟು ಎಲ್ಲ ಕಡೆ ಒಂದೇ ರೀತಿಯ ಬೆಳೆಯನ್ನು ಕಾಪಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ಮಳೆ ಹಾನಿಯಿಂದಾದ ನಷ್ಟವನ್ನು ಸರಿದೂಗಿಸಲು ದಕ್ಷಿಣ ಕನ್ನಡ ಮತ್ತು ಉಡುಪಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಬಳಿ ಕೇಳಿದ್ದೇವೆ ಎಂದು ಸುನಿಲ್ ಕುಮಾರ್ ತಿಳಿಸಿದರು.