ಉಡುಪಿ, ಜ 29(SM): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮರಳುಗಾರಿಕೆಯಲ್ಲಿ ೩೦ ಶೇಕಡ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ದಲಿತರು, ಸರಕಾರ ೩೦ ಶೇಕಡ ಮರಳುಗಾರಿಕೆಗೆ ಮೀಸಲಾತಿ ನೀಡಬೇಕು. ದಲಿತರಿಗೂ ಕೂಡಾ ಸ್ವಾವಲಂಬಿ ಬದುಕು ನಡೆಸಲು ಸರಕಾರ ಹಾಗೂ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು. ನಮ್ಮ ಬಗ್ಗೆ ಧ್ವನಿ ಎತ್ತ ಬೇಕಾಗಿದ್ದ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ ಎಂದು ಶಾಸಕ ರಘುಪತಿ ಭಟ್ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರ ಈ ಘೋಷಣೆಗಳು ಅಲ್ಲೇ ಇದ್ದಂತಹ ಶಾಸಕರ ಅಭಿಮಾನಿಗಳನ್ನು ಕೆರಳಿಸಿತು. ವಿನಾ ಕಾರಣ ಶಾಸಕರ ವಿರುದ್ದ ಧಿಕ್ಕಾರದ ಕೂಗು ಹಾಕಿರುವುದನ್ನು ವಿರೋಧಿಸಿ ಮರಳು ಹೋರಾಟಗಾರರು ದಲಿತ ಸಂಘಟನೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರು ತಮ್ಮ ಲಾಭಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ. ದಲಿತರು ಸೇರಿದಂತೆ ಎಲ್ಲಾರಿಗೂ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಜಿಲ್ಲಾಡಳಿತದ ಸುತ್ತಾ ಬಿಗಿ ಭದ್ರತೆಯನ್ನು ಒದಗಿಸುತ್ತಿದ್ದ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.