ಮಂಗಳೂರು, ಆ 06 (DaijiworldNews/DB): ಕರಾವಳಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 7ರ ಭಾನುವಾರವೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ನಾಳೆ ರೆಡ್ ಅಲರ್ಟ್ ಇರಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆಗಸ್ಟ್ 6ರ ಬೆಳಗ್ಗೆವರೆಗೆ ರೆಡ್ ಅಲರ್ಟ್ ಘೋಷಿಸಿತ್ತು. ಆದರೆ ಇದೀಗ ನಾಳೆಯೂ ಮಳೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇರುವ ಕಾರಣ ಭಾನುವಾರವೂ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿಯಲಿದೆ. ಆಗಸ್ಟ್ 7ರಿಂದ ಆಗಸ್ಟ್ 11ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರಲಿದೆ.
ಈ ಹಿಂದೆ ಆಗಸ್ಟ್ 6ರ ಬೆಳಗ್ಗೆವರೆಗೆ ರೆಡ್ ಅಲರ್ಟ್ ಮತ್ತು ಆಗಸ್ಟ್7ರವರೆಗೆ ಆರೆಂಜ್ ಅಲರ್ಟ್, ಆನಂತರ ಆಗಸ್ಟ್ 10ರವರೆಗೆ ಮೂರೂ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿತ್ತು. ಆದರೆ ಇದೀಗ ಈ ಮೂರೂ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಳೆ ರೆಡ್ ಅಲರ್ಟ್ ಹಾಗೂ ಬಳಿಕದ ನಾಲ್ಕು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.