ಮಂಗಳೂರು, ಆ 06 (DaijiworldNews/DB): ದುಷ್ಕರ್ಮಿಗಳಿಂದ ಹತ್ಯೆಯಾದವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಬಾರದು. ತಾರತಮ್ಯ ಮಾಡುವುದನ್ನು ಯಾವ ಧರ್ಮದವರೂ ಸಹ ಒಪ್ಪುವುದಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಸಮಾನ ಪರಿಹಾರ ಕೊಟ್ಟಿದ್ದೇವೆ. ಅಶ್ರಫ್ ಕಲಾಯಿ- ಶರತ್ ಮಡಿವಾಳ ಇಬ್ಬರ ಕುಟುಂಬಕ್ಕೂ ಪರಿಹಾರ ನೀಡಿದ್ದೇವೆ. ದೀಪಕ್ ರಾವ್ - ಬಷೀರ್ ಕುಟುಂಬಕ್ಕೂ ಸಮಾನ ಪರಿಹಾರ ಕೊಡಲಾಗಿದೆ. ವೈಯಕ್ತಿಕ ದ್ವೇಷದ ಹಲ್ಲೆ ಆದಾಗ ಪರಿಹಾರ ಕೊಡದೆ ಇರಬಹುದು. ಆದರೆ ಒಬ್ಬರ ಮನೆಗೆ ಹೋಗಿ ಇನ್ನೊಬ್ಬರ ಮನೆಗೆ ಹೋಗದೆ ತಾರತಮ್ಯ ಮಾಡಿಲ್ಲ ಎಂದರು.
ಹತ್ಯೆಯಾದ ಎಲ್ಲರ ಮನೆಗೂ ಬರುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳುವುದಿಲ್ಲ ಅಂದುಕೊಂಡಿದ್ದೇವೆ. ಪರಿಹಾರ ಕೊಡುವ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸುತ್ತಾರೆ. ಕನಿಷ್ಠ ಮಾನವೀಯತೆ ದೃಷ್ಟಿಯಿಂದಾದರೂ ಮನೆಗೆ ಹೋಗಬೇಕು ಎಂದವರು ಇದೇ ವೇಳೆ ಆಗ್ರಹಿಸಿದರು.
ಅನುದಾನ ಕೇಳುವ ಧೈರ್ಯ ಇಲ್ಲ
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ, ಅತಿವೃಷ್ಟಿಯಿಂದ ಜನರು ತತ್ತರಿಸಿದ್ದಾರೆ. ರಾಜ್ಯ ಸರ್ಕಾರದಿಂದ ಜನರ ಕಣ್ಣೀರು ಒರೆಸುವ ಯಾವುದೇ ಯೋಜನೆ ಇಲ್ಲ. ಸಂಕಷ್ಟದಲ್ಲಿರುವ ರಾಜ್ಯದ ನೊಂದ ಜನರನ್ನು ಅನಾಥರಾಗಿಸುವುದರೊಂದಿಗೆ ಅತಿವೃಷ್ಟಿ, ಪ್ರಕೃತಿ ವಿಕೋಪ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಯು. ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಮೇಲೆ ಜನರ ನಂಬಿಕೆ ಸಂಪೂರ್ಣ ಹೊರಟು ಹೋಗಿದೆ. ಹೀಗಾಗಿ ಸಂಕಷ್ಟ ಎದುರಿಸುತ್ತಿರುವವರ ರಕ್ಷಣೆಗೆ ಸರ್ಕಾರ ಬರಲಿದೆ ಎಂಬ ವಿಶ್ವಾಸ ಜನರಿಗಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದರೂ ಸರ್ಕಾರ ಅನುದಾನ ಕೇಳಿಲ್ಲ. ಎನ್ ಡಿ ಆರ್ ಎಫ್ ಫಂಡ್ ನಿಂದ ಅನುದಾನ ಕೇಳುವ ಧೈರ್ಯ ರಾಜ್ಯದ ಬಿಜೆಪಿ ಸಂಸದರಿಗೆ, ರಾಜ್ಯ ಸರ್ಕಾರಕ್ಕೆಇಲ್ಲದಾಗಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಪಕ್ಷ ಉಳಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆಯೇ ಹೊರತು ಜನರನ್ನು ಉಳಿಸುವ ಕೆಲಸಕ್ಕೆ ಅಲ್ಲ ಎಂದರು.