ಉಜಿರೆ,ಜ 29 (MSP): ಧರ್ಮಸ್ಥಳದಲ್ಲಿ ಫೆ. 9 ರಿಂದ 18 ರ ವರೆಗೆ ನಡೆಯಲಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಧರ್ಮಸ್ಥಳದ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ನಡೆಯಿತು.
ಸಚಿವ ಯು.ಟಿ.ಖಾದರ್ಎಲ್ಲಾ ಇಲಾಖಾ ಅಧಿಕಾರಿಗಳಿಂದ ಪ್ರಗತಿ ಬಗ್ಗೆ ಸವಿವರ ಮಾಹಿತಿ ಪಡೆದು ಫೆ.10 ರೊಳಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು. ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದವರೆಗೆ, ಬಾಹುಬಲಿ ಬೆಟ್ಟ ಸಂಪರ್ಕರಸ್ತೆ, ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದರಸ್ತೆಯಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಫೆಬ್ರವರಿ ಪ್ರಥಮ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕಎಂಜಿನಿಯರ್ ಶಿವಪ್ರಸಾದ ಅಜಿಲ ತಿಳಿಸಿದರು.
ಮಸ್ತಕಾಭಿಷೇಕ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಬರುವುದರಿಂದ ಸುರಕ್ಷತೆ ಮತ್ತು ಭದ್ರತೆ ಬಗ್ಯೆಎಚ್ಚರಿಕೆ ವಹಿಸಬೇಕು.ಅಲ್ಲಲ್ಲಿ ಸಿ.ಸಿ.ಟಿ.ವಿ. ಅಳವಡಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ಅಲಂಕಾರಿಕ ವಿದ್ಯುದ್ದೀಪಗಳನ್ನು ಅಳವಡಿಸಬೇಕೆಂದು ಪ್ರಸ್ತಾಪ ಬಂದಾಗ ಸಚಿವರು ಅಂದಾಜು ವೆಚ್ಚ ಅಧಿಕಾರಿಗಳಲ್ಲಿ ಕೇಳಿದರು.ತಕ್ಷಣ ಸಚಿವ ಖಾದರ್ ಪ್ರವಾಸೋದ್ಯಮ ಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯುದ್ದೀಪಗಳಿಂದ ರಸ್ತೆ ಬದಿಯಲ್ಲಿ ಅಲಂಕಾರಗೊಳಿಸಲು ಎರಡುಕೋಟಿ ರೂ. ಬೇಕಾಗಿದ್ದು ಮಂಜೂರು ಮಾಡುವಂತೆ ಕೋರಿದರು.ಸಚಿವರು ತಕ್ಷಣ ಅನುಮತಿ ನೀಡಿ ಅನುದಾನ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ಮಂಗಳವಾರ ಸಂಜೆಯೇ ಪ್ರಸ್ತಾವನೆ ಕಳುಹಿಸುವುದಾಗಿ ಸಚಿವ ಖಾದರ್ ತಿಳಿಸಿದರು. ಹೆಗ್ಗಡೆಯವರಿಗೂ ದೂರವಾಣಿ ಮೂಲಕ ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡಿಸಿ, ಹೆಗ್ಗಡೆಯವರು ಅವರನ್ನು ಕ್ಷೇತ್ರಕ್ಕೆ ಆಮಂತ್ರಿಸಿದರು.ಮಸ್ತಕಾಭಿಷೇಕ ಸಂದರ್ಭದಲ್ಲಿ ಸೇವೆ ಮಾಡುವ ಅವಕಾಶ ದೊರಕಿರುವುದು ದೇವರು ನಮಗೆ ಕೊಟ್ಟ ಭಾಗ್ಯ.ಎಲ್ಲಾ ಅಧಿಕಾರಿಗಳು ಸಂಘಟಿತ ಪ್ರಯತ್ನ ಮಾಡಿ, ಮಸ್ತಕಾಭಿಷೇಕ ಯಶಸ್ಸಿಗೆ ಸಹಕರಿಸಬೇಕು ಎಂದು ಹೇಳಿದರು. ಮೆಸ್ಕಾಂ, ಸಾರಿಗೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರಿಗೂ ಸಚಿವರು ಸೂಕ್ತ ನಿರ್ದೇಶನ ನೀಡಿದರು.ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಬಾಹುಬಲಿಯ ಅಹಿಂಸೆ, ಸಂಯಮ, ತ್ಯಾಗ ಮತ್ತು ಶಾಂತಿಯ ಸಂದೇಶ ಸಾರುವುದೇಮಸ್ತಕಾಭಿಷೇಕದಉದ್ದೇಶವಾಗಿದೆಎಂದು ಹೇಳಿದರು.ಎಲ್ಲೆಲ್ಲೂ ಅಶಾಂತಿ, ಗೊಂದಲ ಇರುವ ಇಂದು ಬಾಹುಬಲಿಯ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಯಾವುದನ್ನೂ ಅತಿಯಾಗಿ ಮಾಡದೆ ಮಾಧ್ಯಸ್ಥ ಭಾವದಿಂದ ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ.