ಉಡುಪಿ,ಜ 29 (MSP): ನಿಯಮ ಉಲ್ಲಂಘಿಸಿ ಲೈಟ್ ಫಿಶಿಂಗ್ ಸೇರಿ ಅವೈಜ್ಞಾನಿಕ ಮೀನುಗಾರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಇದರ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿ ಜ.29ರ ಮಂಗಳವಾರ ಮಲ್ಪೆಯ ಮೀನುಗಾರರು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ, ಪ್ರತಿಭಟಿಸಿದರು.
ಮಲ್ಪೆ ಬಂದರಿನ ಮೀನುಗಾರಿಕೆ ಕಚೇರಿ ಮುಂಭಾಗದಲ್ಲಿ ಆಳ ಸಮುದ್ರ ಮೀನುಗಾರರು, ನಾಡದೋಣಿ ಒಕ್ಕೂಟದ ಮೀನುಗಾರರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದರು. ಬೆಳಗ್ಗೆ 9:30ರಿಂದ ಮೀನುಗಾರರು ಪ್ರತಿಭಟನೆ ಆರಂಭಿಸಿದ್ದಾರೆ. ಬೆಳಗ್ಗೆ ಕಚೇರಿಗೆ ಆಗಮಿಸಿದ ಮೀನುಗಾರಿಕೆ ಇಲಾಖೆ ಉಪ‘ನಿರ್ದೇಶಕ ಪಾರ್ಶ್ವನಾಥ್ , ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ದಿಗ್ಬಂಧನಕ್ಕೆ ಒಳಗಾದರು.
ಡಿಸಿ ಆಗಮನಕ್ಕೆ ಪಟ್ಟು: ಜಿಲ್ಲಾಡಳಿತ ಮೀನುಗಾರರನ್ನು ನಿರ್ಲ್ಯಕ್ಷಿಸುತ್ತಿದೆ. ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಜಿಲ್ಲಾಡಳಿತ ವಿರುದ್ದ ದಿಕ್ಕಾರ ಕೂಗಿದರು. ಸ್ಥಳಕ್ಕೆ ಡಿಸಿ, ಜಿಲ್ಲಾ ಪಂಚಾಯ್ತಿ ಸಿಇಒ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು, ಪ್ರತಿಭಟನೆ ಮುಂದುವರಿಸಿದರು.