ಕುಂದಾಪುರ, ಆ 05 (DaijiworldNews/DB): ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಈತನಿಂದ ಪ್ರತಿ ಬ್ಯಾಗ್ನಲ್ಲಿ 50 ಕೆಜಿಯಂತೆ ಒಟ್ಟು 41ಬ್ಯಾಗ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮುನಾಫ್ ಬಂಧಿತ ಆರೋಪಿ. ಖಚಿತ ಸುಳಿವಿನ ಮೇರೆಗೆ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ಹಾಗೂ ಕುಂದಾಪುರ ಠಾಣೆಯ ಪಿಎಸ್ಐ ಸದಾಶಿವ ಗವರೋಜಿ ಅವರು ತಲ್ಲೂರು ಪತ್ರಿಕಟ್ಟೆಯಲ್ಲಿರುವ ಮುನಾಫ್ನ ಮನೆಗೆ ಗುರುವಾರ ತೆರಳಿದ್ದರು. ಈ ವೇಳೆ ಮನೆ ಮುಂಭಾಗದಲ್ಲಿ 50 ಕೆಜಿಯ ಎರಡು ಬ್ಯಾಗ್ ಅಕ್ಕಿಯನ್ನು ಅಟೋರಿಕ್ಷಾದಲ್ಲಿ ಪ್ಯಾಕ್ ಮಾಡಿಟ್ಟಿರುವುದು ಹಾಗೂ 3,000 ರೂ.ಗಳ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಇಟ್ಟಿರುವುದು ಗಮನಕ್ಕೆ ಬಂದಿತ್ತು. ಬಳಿಕ ಮನೆಯನ್ನು ಪರಿಶೀಲಿಸಿದಾಗ ತಲಾ 50 ಕೆಜಿ ತೂಕದ ಅಕ್ಕಿ ಹೊಂದಿರುವ 39 ಬ್ಯಾಗ್ಗಳು ಮನೆಯ ಕೋಣೆಯೊಳಗೆ ಪತ್ತೆಯಾಗಿತ್ತು.
ಒಟ್ಟು 2,050 ಕೆಜಿ ತೂಕದ 41 ಬ್ಯಾಗ್ಗಳು ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಇದರ ಮೌಲ್ಯ45,100 ರೂ.ಗಳಾಗಿದೆ. ತನಿಖೆ ನಡೆಸಿದಾಗ ಸರ್ಕಾರದಿಂದ ನೀಡಲಾಗುವ ಉಚಿತ ಅಕ್ಕಿಯನ್ನು ಫಲಾನುಭವಿಗಳಿಂದ ಖರೀದಿಸಿ ಈತ ಅದನ್ನು ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.