ಮಂಗಳೂರು, ಆ 05 (DaijiworldNews/DB): ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆಗಸ್ಟ್ 6ರ ಬೆಳಗ್ಗೆವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬಳಿಕ ಆರೆಂಜ್ ಅಲರ್ಟ್ ಮತ್ತು ಮೂರನೇ ದಿನದಂದು ಎಲ್ಲೋ ಅಲರ್ಟ್ ಇರಲಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಇಂದು ರೆಡ್ ಅಲರ್ಟ್ ಇದ್ದು, ನಾಳೆ ಬೆಳಗ್ಗೆ 8.30ರವರೆಗೆ ಮುಂದುವರಿಯಲಿದೆ. ಬಳಿಕ ಆಗಸ್ಟ್7ರವರೆಗೆ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರಲಿದೆ. ಆಗಸ್ಟ್ 8ರಿಂದ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಲಿದ್ದು, ಆಗಸ್ಟ್ 10ರವರೆಗೆ ಮೂರೂ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಇರಲಿದೆ.
ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ ವಾಡಿಕೆ ಮಳೆಗಿಂತ ಕಡಿಮೆ ಸುರಿದಿದೆ. ಆಗಸ್ಟ್ 1-5 ನಡುವೆ 171 ವಾಡಿಕೆ ಮಳೆಯಾಗಬೇಕಿದ್ದು, 129 ಮಿಮೀ ಮಳೆಯಾಗಿದೆ. 25 ಮಿಮೀನಷ್ಟು ಮಳೆ ಕೊರತೆಯಾಗಿದೆ. ಜನವರಿಯಿಂದ ಆಗಸ್ಟ್ 5ರವರೆಗೆ 2303 ಮಿಮೀ ವಾಡಿಕೆ ಮಳೆಯಾಗಬೇಕಿದ್ದು, 2445 ಮಿಮೀ ಮಳೆ ಬಿದ್ದಿದೆ. 6 ಮಿಮೀ ಮಳೆ ಕೊರತೆಯಾಗಿದೆ.