ಮಂಗಳೂರು, ಆ 04 (DaijiworldNews/SM) : ದಕ್ಷ್ಣಿಣ ಕನ್ನಡ ಜಿಲ್ಲೆಯಲ್ಲಿ ವಾಮಂಜೂರಿನಲ್ಲಿ ನಡೆದಿದ್ದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಸೆರೆವಾಸ ಅನುಭವಿಸುತ್ತಿರುವ ಪ್ರವೀಣ್ ಕುಮಾರ್(62) ನನ್ನು ಸದ್ಯ ಬಿಡುಗಡೆ ನಿರ್ಧಾರ ಕೈಗೊಳ್ಳಲಾಗಿದ್ದು, ಕುಟುಂಬಸ್ಥರು ಆತನ ಬಿಡುಗಡೆಗೆ ತಗಾದೆ ಎತ್ತಿದ್ದಾರೆ.
ಭಾರತದ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ನಾಲ್ವರನ್ನು ಕೊಂದಿದ್ದ ಆರೋಪಿಯನ್ನು ಕ್ಷಮಧಾನದ ಆಧಾರದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಆದರೆ, ಇದಕ್ಕೆ ಆತನಿಂದ ಕೊಲೆಯಾದವರ ಕುಟುಂಬದವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಆತನನ್ನು ಬಿಡುಗಡೆ ಮಾಡದಂತೆ ಕುಟುಂಬಸ್ಥರು ಪೊಲೀಸ್ ಇಲಾಖೆಮೊರೆ ಹೋಗಿದ್ದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಂಗಳೂರು ಪೊಲೀಸ್ ಕಮಿಷನರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲುತೀರ್ಮಾನ ಕೈಗೊಂಡಿದ್ದಾರೆ. ವಾಮಜೂರು ಪ್ರವೀಣ್ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ.
1994ರ ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ(75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಅವರದ್ದೇ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಪ್ರವೀಣ್ ಬರ್ಬರವಾಗಿ ಕೊಲೆ ಮಾಡಿ ನಗದು, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ.
ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಪ್ರವೀಣ್, ಮೂಲತಃ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದಾನೆ. . ಸಿಂಗಲ್ ನಂಬರ್ ಲಾಟರಿ ಟಿಕೆಟ್ ಖರೀದಿಯ ಚಟಕ್ಕೆ ಅಂಟಿಕೊಂಡಿದ್ದ ಆತ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದ ಎನ್ನಲಾಗಿದೆ. ಆ ಬಳಿಕ ಚಿನ್ನಾಭರಣ ಅಡವಿಟ್ಟು ವ್ಯವಹಾರ ಮುಂದುವರೆಸಲು ಯತ್ನಿಸಿ ವಿಫಲನಾದ ಸಂದರ್ಭದಲ್ಲಿ ಮನೆಹಾಳು ಕೆಲಸಕ್ಕೆ ಮುಂದಾಗಿ ಕಂಬಿ ಹಿಂದೆ ಲಾಕ್ ಆಗಿದ್ದ.
ನ್ಯಾಯಾಂಗ ಬಂಧನದಲ್ಲಿದ್ದ ಆತನಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಕೆಳಗಿನ ಕೋರ್ಟು ನೀಡಿದ ಈ ಶಿಕ್ಷೆಯನ್ನು ಬಳಿಕ ಹೈಕೋರ್ಟು ಮತ್ತು 2003 ರಲ್ಲಿ ಸುಪ್ರೀಂ ಕೋರ್ಟು ಕೂಡಾ ಎತ್ತಿ ಹಿಡಿದಿತ್ತು. ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದ.
ಈ ಅರ್ಜಿಯನ್ನು 2013 ಎಪ್ರಿಲ್ 4 ರಂದು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ಆದರೆ 2014 ಜನವರಿ 22 ರಂದು ಸುಪ್ರೀಂ ಕೋರ್ಟು ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇದೀಗ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಸರಕಾರವು ಕೆಲವು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯವನ್ನು ಕಲ್ಪಿಸಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಒಬ್ಭನಾಗಿದ್ದಾನೆ.