ಕೋಟ,ಜ 29 (MSP): ಶೌಚಾಲಯದ ಗುಂಡಿ ವಿಚಾರದ ವಿವಾದದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿವೈಎಸ್ಪಿ ಜಯಶಂಕರ್ ನೇತೃತ್ವ ದಲ್ಲಿ ಹಲವು ತಂಡವಾಗಿ ಪೊಲೀಸರು ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದರೂ ಪ್ರಮುಖ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ ಎಂದು ಹೇಳಲಾಗಿದೆ.
ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಹಲವು ರಾಜಕೀಯ ಮುಖಂಡರು ಮೃತ ಯುವಕರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ಸೋಮವಾರವೂ ಕೂಡಾ ಭರತ್ ಹಾಗೂ ಯತೀಶ್ ಮನೆಯಲ್ಲಿ ರೋಧನ ಮುಗಿಲು ಮುಟ್ಟಿತ್ತು.
ಒಂದೆಡೆ ಮನೆಯ ಆಧಾರವಾಗಿದ್ದ ಭರತ್ ತನ್ನ ದಿನದ ರಿಕ್ಷಾ ಚಾಲನೆಯೊಂದಿಗೆ ಕುಟುಂಬವನ್ನು ನಡೆಸುತ್ತಿದ್ದರೆ, ಇನ್ನೊಂದೆಡೆ ಯತೀಶ್ ತನ್ನ ಉದ್ಯೋಗವನ್ನರಸಿ ಬೆಂಗಳೂರಿನಲ್ಲಿ ಬ್ಯಾಂಕ್ ಕೆಲಸ ಸಿಕ್ಕ ಖುಷಿಯಲ್ಲಿದ್ದರು. ಇವೆಲ್ಲವುದರ ನಡುವೆ ಭರತ್ ಹಾಗೂ ಯತೀಶ್ ರನ್ನು ಕಳೆದುಕೊಂಡ ದುಸ್ಥಿತಿಯಲ್ಲಿ ಸ್ನೇಹಿತರ ಬಳಗ ಮೌನಕ್ಕೆ ಜಾರಿದೆ.
ಗೆಳೆಯ ಲೋಹಿತ್ ಅವರ ಸಹಾಯಕ್ಕೆ ಧಾವಿಸಿ ಬಂದಿದ್ದ ಯತೀಶ್ ಕಾಂಚನ್ ಮತ್ತು ಭರತ್ ಶ್ರೀಯಾನ್ ಅವರನ್ನು ಜ.28ರಂದು ತಡರಾತ್ರಿ ಕೋಟದ ಮಣೂರು-ಚಿಕ್ಕನಕೆರೆಯಲ್ಲಿ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿ, ಪ್ರತಿಭಟನೆಗಳು ನಡೆದಿವೆ.