ಉಡುಪಿ, ಆ 04 (DaijiworldNews/DB): ಆಭರಣ, ಮನೆ ಕಳ್ಳತನ ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬ್ರಹ್ಮಾವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗಳೂರಿನ ಚಂದ್ರಾಪುರದಲ್ಲಿ ವಾಸವಾಗಿರುವ ಮೂಲತಃ ಹೆಬದ್ರಿ ಶಿವಪುರ ಗ್ರಾಮದ ನಿವಾಸಿ ದಿಲೀಪ್ ಶೆಟ್ಟಿ, ತಮಿಳುನಾಡಿನ ಆಲಂದೊಂಬು ಮೆಟ್ಟುಪಾಳಯಂನ ರಾಜನ್ ಮತ್ತು ತಮಿಳುನಾಡಿನ ಜಡಯಂ ಪಾಳ್ಯಂ ನಿವಾಸಿ ಶಣ್ಮುಗಂ ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ಪೊಲೀಸ್ ತಂಡವು ಹಾವಂಜೆ ಗ್ರಾಮದ ಶೇಡಿಗುಳಿಯಲ್ಲಿ ಅನುಮಾನದ ಹಿನ್ನೆಲೆಯಲ್ಲಿ ಜುಲೈ 29ರಂದು ಸ್ಯಾಂಟ್ರೋ ಕಾರನ್ನು ತಡೆದು ಪರಿಶೀಲಿಸಿದಾಗ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್ಗಳು ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿದ್ದವು. ಪ್ರಕರಣ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜನ್, ಕುಟ್ಟಿ ವಿಜಯನ್ ಮತ್ತು ಸಜಿತ್ ವರ್ಗೀಸ್ ಎಂಬ ಕುಖ್ಯಾತ ಕಳ್ಳರರೊಂದಿಗೆ ಈ ಗ್ಯಾಂಗ್ ಗುರ್ತಿಸಿಕೊಂಡಿದ್ದು, ಸ್ಯಾಂಟ್ರೋ ಕಾರು ಮತ್ತು ಓಮ್ನಿ ಕಾರುಗಳಲ್ಲಿ ತೆರಳಿ ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದರು.
ರಾಜನ್ ಎಂಬಾತ 19 ವರ್ಷದಿಂದ ಕಳ್ಳತನಕ್ಕೆ ಇಳಿದಿದ್ದ.ಈತನ ವಿರುದ್ದ ಚಿಕ್ಕಮಗಳೂರು, ಕುಮಟಾ, ಸುರತ್ಕಲ್, ತಾರೂರುಗಳಲ್ಲಿ ತಲಾ ಒಂದು ಪ್ರಕರಣ, ತಿರುವೂರು ಮತ್ತು ಪಟ್ಟಂಬಿಗಳಲ್ಲಿ ತಲಾ ನಾಲ್ಕು ಪ್ರಕರಣ, ತಮಿಳುನಾಡಿನ ನೀಲಗಿರಿಯಲ್ಲಿ ಮೂರು ಪ್ರಕರಣ ಸಹಿತ ಒಟ್ಟು 22 ಪ್ರಕರಣ ದಾಖಲಾಗಿದೆ. ಜಾಮೀನುರಹಿತ ವಾರಂಟ್ ಕೂಡಾ ಈತನ ವಿರುದ್ದ ಜಾರಿಯಾಗಿದೆ.
ದಿಲೀಪ್ ಶೆಟ್ಟಿ ವಿರುದ್ದ ಅರಸೀಕರೆ, ಬೆಂಗಳೂರು ಮಂಡ್ಯದಲ್ಲಿ ಕೆಲವು ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾದ ಸಂಬಂಧ ಪ್ರಕರಣಗಳು ಬಾಕಿ ಇದ್ದು, ಈತನ ವಿರುದ್ದವೂ ಜಾಮೀನುರಹಿತ ವಾರಂಟ್ ಜಾರಿಯಾಗಿದೆ. ಕಳವುಗೈದ ಸಾಮಾಗ್ರಿಗಳನ್ನು ಬೆಂಗಳೂರು ಮತ್ತು ಕೊಯಂಬತ್ತೂರಿನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 13 ಲಕ್ಷ ರೂ. ಮೌಲ್ಯದ ಆಭರಣ, ಒಂದು ಸ್ಯಾಂಟ್ರೋ ಕಾರು, ಒಂದು ಓಮ್ನಿ ಕಾರು ಮತ್ತು ಕಳವುಗೈದ ಇತರ ಸಾಮಾಗ್ರಿಗಳು ಸೇರಿ 20 ರೂ.ಗಳನ್ನು ದಿಲೀಪ್ ಶೆಟ್ಟಿ ಮತ್ತು ರಾಜನ್ನಿಂದ ವಶಪಡಿಸಿಕೊಳ್ಳಲಾಗಿದೆ.
ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾ ಪಿಎಸ್ಐ ಗುರುನಾಥ್ ಬಿ. ಹಡಿಮನಿ, ತನಿಖಾ ಪಿಎಸ್ಐ ಮುಕ್ತಾಬಾಯಿ, ಕೋಟ ಠಾಣೆಯ ಪಿಎಸ್ಐ ಮಧು ಬಿ.ಇ., ಬ್ರಹ್ಮಾವರ ಠಾಣೆಯ ಪ್ರೊಬೆಷನರಿ ಪಿಎಸ್ಐ ಸುಬ್ರಹ್ಮಣ್ಯ ದೇವಾಡಿಗ, ಸಿಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್, ಮೊಹಮ್ಮದ್ ಅಸ್ಮಿಲ್, ರಾಘವೇಂದ್ರ ಕಾರ್ಕಡ, ನಬಿತಾ, ಸುರೇಶ್ ಪ್ರಭು, ದಿಲೀಪ್ ಅಣ್ಣಪ್ಪ, ಕೋಟ ಸ್ಟೇಷನ್ ಸಿಬಂದಿಗಳಾದ ಪ್ರಸನ್ನ, ರಾಘವೇಂದ್ರ, ದುಂಡಪ್ಪ, ಗೋಪಾಲ ನಾಯ್ಕ, ಜಿಲ್ಲಾ ತಾಂತ್ರಿಕ ವಿಭಾಗ ಸಿಬಂದಿ ದಿನೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.