ಮಂಗಳೂರು,ಜ 29 (MSP): ಬೆಳಕು ಮೀನುಗಾರಿಕೆ ನಡೆಸಿ ದಕ್ಕೆಗೆ ಹಿಂತಿರುಗುತ್ತಿದ್ದ ಪರ್ಸಿನ್ ಮತ್ತು ಬುಲ್ಟ್ರಾಲ್ ಮೀನುಗಾರರಿಗೆ ಸೋಮವಾರ ಸಾಂಪ್ರದಾಯಿಕ ಮೀನುಗಾರರು ಮೀನು ಇಳಿಸಲು ಅವಕಾಶ ಕಲ್ಪಿಸದೇ ಮೀನು ತುಂಬಿದ ಬೋಟ್ಗಳನ್ನು ವಾಪಸ್ ಕಳುಹಿಸಿದ ಕಾರಣ ಸೋಮವಾರ ಬೆಳಗ್ಗೆ ದಕ್ಕೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಕಂಡುಬಂದಿತ್ತು.
ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಿದರು.ಬೆಳಕು ಮೀನುಗಾರಿಕೆ ನಡೆಸಲು ಅವಕಾಶ ಕೋರಿ ಕೆಲ ಸಮಯದ ಹಿಂದೆ ಪರ್ಸಿನ್ ಬೋಟ್ ಮೀನುಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮೀನುಗಾರರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆಳ ಸಮುದ್ರದಲ್ಲಿ (ದಡದಿಂದ 12 ನಾಟಿಕಲ್ ಮೈಲ್ ದೂರದಲ್ಲಿ) ಬೆಳಕು ಮೀನುಗಾರಿಕೆ ನಡೆಸಬಹುದು ಎಂಬುದಾಗಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಕೆಲವು ಪರ್ಸಿನ್ ಮೀನುಗಾರರು ಬೆಳಕು ಮೀನುಗಾರಿಕೆಗೆ ತೆರಳಿದ್ದರು.
ಇದೇ ವಿಚಾರಕ್ಕಾಗಿ ಶನಿವಾರ ಸಾಂಪ್ರದಾಯಿಕ ಮೀನುಗಾರರ ಪ್ರತಿಭಟನೆ ನಡೆದಿತ್ತು. ಈ ನಡುವೆ ಶನಿವಾರ ಮೀನುಗಾರಿಕೆಗೆ ತೆರಳಿದ ತಂಡಗಳು ಸೋಮವಾರ ವಾಪಸ್ಸಾಗಲಿವೆ ಎಂಬ ಸೂಚನೆ ದೊರೆತ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮೀನುಗಾರರು ಸೋಮವಾರ ದಡದ ಸಮೀಪ ಬಂದ ಬೋಟ್ಗಳನ್ನು ವಾಪಸ್ ಕಳುಹಿಸಿದರು. ಬೆಳಕು ಮೀನುಗಾರಿಕೆ ನಡೆಸಿದ್ದ ಮೀನುಗಾರರು ಕಡಲಲ್ಲೇ ಬಾಕಿಯಾಗಿದ್ದಾರೆ ಎಂದು ಮೀನುಗಾರರು ತಿಳಿಸಿದ್ದಾರೆ. ಬಳಿಕದ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಇದ್ದಾರೆ.