ಮಂಗಳೂರು, ಆ 04 (DaijiworldNews/DB): ಕುಲಶೇಖರ ಜ್ಯೋತಿ ನಗರದ ಶ್ರೀ ಧರ್ಮಶಾಸ್ತ್ರ ಮಂದಿರದ ಟ್ರಸ್ಟ್ ವತಿಯಿಂದ 9ನೇ ವರ್ಷದ ಆಟಿಡೊಂಜಿ ಅಯ್ತಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಉದ್ಘಾಟಿಸಿದರು. ಬಳಿಕ ಆಟಿ ಆಚರಣೆಯ ಮಹತ್ವದ ಕುರಿತು ವಿವರಿಸಿದರು. ಕಾರ್ಪೋರೇಟರ್ ಭಾಸ್ಕರ್ ಕೆ., ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಮಲ್ಲಿಕಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷತೆ ವಹಿಸಿದ್ದ ಮಂದಿರದ ಮ್ಯಾನೇಜಿಂಗ್ ಟ್ರಸ್ಟಿ, ನ್ಯಾಯವಾದಿ ರಾಮ್ಪ್ರಸಾದ್ ಎಸ್. ಮಾತನಾಡಿ, ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತುಳುವರ ಆಚರಣೆಗಳು ಮಹತ್ವ ಪಡೆಯುತ್ತವೆ. ಆಟಿ ತಿಂಗಳ ಆಚರಣೆಯೂ ಇದರಲ್ಲಿ ಒಂದಾಗಿದ್ದು, ಕಳೆದ ಎಂಟು ವರ್ಷಗಳಿಂದ ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ ಆಟಿ ತಿಂಗಳ ಆಚರಣೆಯನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಜಿ. ಸ್ಕ್ವೇರ್ ನೃತ್ಯ ತಂಡದಿಂದ ಜಾನಪದ ಶೈಲಿಯ ತುಳು ನೃತ್ಯ ಪ್ರದರ್ಶನ ನಡೆಯಿತು. ತುಳುನಾಡಿನ ಸಾಂಪ್ರದಾಯಿಕ ಪಂದ್ಯಗಳಾದ ತೆಂಗಿನಕಾಯಿ ಸಿಪ್ಪೆ ತೆಗೆಯುವ ಸ್ಪರ್ಧೆ, ತೆಂಗಿನಕಾಯಿ ತುರಿಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಶ್ರೀ ಧರ್ಮಶಾಸ್ತ್ರ ಮಾತೃ ಮಂಡಳಿಯ ಸದಸ್ಯರು ಸುಮಾರು 32 ಬಗೆಯ ಖಾದ್ಯ ತಯಾರಿಸಿ ಉಣ ಬಡಿಸಿದರು.
ಶ್ರೀ ಧರ್ಮಶಾಸ್ತ್ರ ಸೇವಾ ಸಮಿತಿ ಅಧ್ಯಕ್ಷ ಸಂಜೀವ ಸಪಲ್ಯ, ಶ್ರೀ ಧರ್ಮಶಾಸ್ತ್ರ ಮಾತೃ ಮಂಡಳಿಯ ಅಧ್ಯಕ್ಷೆ ಅನುಪಮಾ ದಿನೇಶ್, ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಯಕ್ಷ ವೃಂದದ ರಾಜೇಂದ್ರ ಕುಮಾರ್ ಬೈತುರ್ಲಿ, ಯುವ ಸೇವಾ ಸಮಿತಿಯ ಅಂಜುಶ್ರೀ ಉಪಸ್ಥಿತರಿದ್ದರು.
ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಸ್ವಾಗತಿಸಿ, ಅನುಪಮಾ ದಿನೇಶ್ ವಂದಿಸಿದರು. ಪ್ರವೀಣ್ ಮೂಡುಶೆಡ್ಡೆ ನಿರೂಪಿಸಿದರು.