ಮಂಗಳೂರು, ಆ 04 (DaijiworldNews/MS): ಸುರತ್ಕಲ್ ಮತ್ತು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಸೂಕ್ಷ್ಮ ಪ್ರದೇಶಗಳಗೆ ಭೇಟಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಪರಿಸ್ಥಿತಿಯನ್ನು ಅವಲೋಕಿಸಿದರು.
ಭೇಟಿ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಹಿರಿಯ ಅಧಿಕಾರಿಗಳಿಂದ ಪರಿಸ್ಥಿತಿಯ ವಿವರ ಸಂಗ್ರಹಿಸಿದರು.
ನಂತರ, ಎಡಿಜಿಪಿ ಅವರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಮತ್ತು ಸಹಜ ಸ್ಥಿತಿಗೆ ಮರಳಲು ಸಿದ್ಧತೆಗಳನ್ನು ಪರಿಶೀಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿಯಾಗಿ ಮೂವರು ಯುವಕರ ಹತ್ಯೆಯ ಬಳಿಕ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಉಂಟಾಗಿತ್ತು. ಈ ಹಿನ್ನಲೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನಿಷೇದಾಜ್ಞೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತ್ತು.