ಮಂಗಳೂರು, ಜ 29 (MSP): ಮಂಗಳೂರಿನ ಕ್ಯಾಥೋಲಿಕ್ ಪರಿವಾರದಲ್ಲಿ ಹುಟ್ಟಿದ, ಕಠಿಣ ಪರಿಶ್ರಮದಿಂದ ಶೂನ್ಯದಿಂದ ನಭಕ್ಕೇರಿದ ಛಲದಂಕ ಮಲ್ಲ ಕರಾವಳಿಯ ಹೆಮ್ಮೆಯ ಪುತ್ರ, ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ (88) ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್ ವಾಜಪೇಯಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಅವರನ್ನು "ಕೊಂಕಣ್ ರೈಲ್ವೆ ಹರಿಕಾರ" ಎಂದೇ ಗುರುತಿಸಲಾಗುತ್ತದೆ.
ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಜಾರ್ಜ್ ಸಂಸತ್ತಿನಲ್ಲಿ ಮಾತನಾಡಲು ನಿಂತರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಅಂತಹ ಮೇರು ವ್ಯಕ್ತಿತ್ವ ಜಾರ್ಜ್ ಅವರದಾಗಿತ್ತು.
ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್, 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು. ಪಾದ್ರಿಯಾಗಲು ಬೇಕಾಗಿದ್ದ ತರಬೇತಿ ಹಾಗೂ ಕಲಿಕೆಗಾಗಿ ಅವರ 16ನೇ ವಯಸ್ಸಿನಲ್ಲಿ ಕಳುಹಿಸಲಾಗಿತ್ತು. ಆದರೆ, ಸಮಾಜಮುಖಿಯಾದ ಬೇರೆಯದೇ ಚಿಂತನೆಗಳನ್ನು ಹೊಂದಿದ್ದ ಜಾರ್ಜ್ 1949ರಲ್ಲಿ ಬಾಂಬೆಗೆ ತೆರಳಿ, ಕಾರ್ಮಿಕ ಸಂಘನೆಯ ಹೋರಾಟಗಳಲ್ಲಿ ಭಾಗಿಯಾದರು.