ಕಾರ್ಕಳ, ಆ 03 (DaijiworldNews/MS): ಮಿಯ್ಯಾರು ಗ್ರಾಮದ ವಾರ್ಡ್ ಸಂಖ್ಯೆ 6 ನೆಲ್ಲಿಗುಡ್ಡೆ ಜನವಸತಿ ಪ್ರದೇಶದಲ್ಲಿ ಇರುವ ಕೈಗಾರಿಕ ಪ್ರಾಂಗಣದಲ್ಲಿ ನಿವೇಶನ ಸಂಖ್ಯೆ 12,16,11 ರಲ್ಲಿ ಆರಂಭಿಸಲು ಉದ್ದೇಶಿಸಿದ ಕ್ಯಾಶ್ಯು ಶೆಲ್ ಮತ್ತು ಕೇಕ್ ಘಟಕ ಪ್ರಾರಂಭಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಗ್ರಾಮಸ್ಥರ ವಿರೋಧದ ನಡುವೆ ಜಿಲ್ಲಾಡಳಿತ ಅನುಮತಿ ನೀಡಿದ್ದಲ್ಲಿ ಯಾವುದೇ ರೀತಿಯಲ್ಲಿ ಹೋರಾಟ ನಡೆಸಲು ಗ್ರಾಮಸ್ಥರು ಬದ್ಧರೆಂದು ನೆಲ್ಲಿಗುಡ್ಡೆ ಪರಿಸರ ಉಳಿಸಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖ್ ಶಬ್ಬೀರ್ ತಿಳಿಸಿದ್ದಾರೆ.
ನಗರದ ಹೋಟೆಲ್ ಪ್ರಕಾಶ್ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಯೋಗ್ಯವಲ್ಲದ ಪರಿಸರದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗಿದೆ. ಇದರ ಪರಿಸರದಲ್ಲಿ ಸುಮಾರು 450ಕ್ಕೂ ಬಡ ಕುಟುಂಬಗಳು ವಾಸಿಸುತ್ತಿದ್ದಾರೆ. ಮೊರಾರ್ಜಿ ಪ್ರೌಢಶಾಲೆ, ವಸತಿ ಪದವಿ ಪೂರ್ವ ಕಾಲೇಜು ಇದ್ದು ಇದರಲ್ಲಿ ಸುಮಾರು 400 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ ಸುಮಾರು 100 ಮೀಟರ್ ದೂರದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ವಸತಿ ಶಿಲ್ಪಕಲಾ ಕೇಂದ್ರ ಶಾಲೆಯಲ್ಲಿ ಸುಮಾರು 150 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ ಅದಕ್ಕೆ ಹೊಂದಿಕೊಂಡು ಅಂಗನವಾಡಿ, ಸರಕಾರಿ ಶಾಲೆಗಳಿವೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಿದರು.
ಈ ಕೈಗಾರಿಕಾ ಪ್ರದೇಶದಲ್ಲಿ ನಿವೇಶನಕೆ ಬಹಳಷ್ಟು ಮಂದಿ ಅರ್ಜೀ ಸಲ್ಲಿಸಿದರೂ ಕೂಡಾ ಅವರುಗಳಿಗೆ ನಿವೇಶನೆ ನೀಡದೇ ಪರಿಸರಕ್ಕೆ ಮಾರಕವಾಗಿರುವ ಕ್ಯಾಶ್ಯು ಆಯಿಲ್ ಶೆಲ್ ಕೇಕ್ ಘಟಕ ಆರಂಭಕ್ಕೆ 3 ನಿವೇಶನವನ್ನು ಒಂದೇ ವ್ಯಕ್ತಿಗೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಂತಹದೇ ಕೈಗಾರಿಕೆಯೊಂದು ಪರಿಸರದ ಗ್ರಾಮವೊಂದರಲ್ಲಿ ತೆರೆಯಲು ಮುಂದಾದಾಗ ಗ್ರಾಮಸ್ಥರ ವಿರುದ್ಧಕ್ಕೆ ಆ ಕಾರ್ಖಾನೆ ಸ್ಥಗಿತಗೊಳಿಸಲಾಗಿತ್ತು. ಇದನ್ನು ಮುಂದಿಟ್ಟು ಮಿಯ್ಯಾರಿನಲ್ಲಿ ಕೂಡಾ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಗೌರವಧ್ಯಕ್ಷ ಮಂಜುನಾಥ ನಾಯಕ್, ಅಧ್ಯಕ್ಷ ಪ್ರಶಾಂತ ಪೂಜಾರಿ, ಜೊತೆ ಕಾರ್ಯದರ್ಶಿ ಗಣೇಶ್ ಕುಮಾರ್, ರಾಜೇಶ್ ದೇವಾಡಿಗ, ಉಪಾಧ್ಯಕ್ಷರಾದ ರಾಜೇಶ್ ಶೆಟ್ಟಿ, ರಂಜಿತ್,ಸದಸ್ಯರಾದ ರವಿ ಹೆಗ್ಡೆ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.