ಕಾರ್ಕಳ, ಆ 03 (DaijiworldNews/MS): ಟಿಪ್ಪರ್ ನಿಂದ ಸೈಜುಕಲ್ಲುಗಳನ್ನು ಅನ್ ಲೋಡ್ ಮಾಡುವಾಗ 40 ಅಡಿ ಎತ್ತರದಿಂದ ಕೆಳಗೆ ಮಗುಚಿ ಬಿದ್ದು, ಚಾಲಕ ಆಸೀಪ್ ಮೃತ ಪಟ್ಟಿರುವ ಘಟನೆ ಮಂಗಳವಾರದಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕಾರ್ಕಳ ತಾಲೂಕು ಸೂಡ ಗ್ರಾಮದ ಸೂಡ ಎಂಬಲ್ಲಿ ಸುರೇಶ್ ಶೆಟ್ಟಿ ಎಂಬುವವರ ಮಾಲಕತ್ವದ ಪ್ರಸ್ತುತ ಕೇರಳ ವಾಸಿ ಬಾಸಿತ್ ಎಂಬುವವರು ಲೀಸ್ ಗೆ ಪಡೆದುಕೊಂಡಿರುವ ಓಂ ಕ್ರಶರ್ ನಲ್ಲಿ ಟಿಪ್ಪರ್ ಚಾಲಕನಾಗಿ ಆಸೀಫ್ ಕೆಲಸ ಮಾಡಿಕೊಂಡಿದ್ದರು.
ಎಂದಿನಂತೆ ಮಂಗಳವಾರ ಕಲ್ಲು ಕೋರೆಯಿಂದ ಸೈಜು ಕಲ್ಲುಗಳನ್ನು ಟಿಪ್ಪರ್ ನಲ್ಲಿ ತಂದು ಓಂ ಕ್ರಶರ್ ನಲ್ಲಿ ಹಾಕುವಾಗ ಈ ಘಟನೆ ನಡೆದಿದೆ.
ಮಧ್ಯಾಹ್ನ 2:30 ಗಂಟೆಗೆ ಕ್ರಶರ್ ಬಳಿ ಇರುವ ಎತ್ತರದ ಜಾಗದಿಂದ ಅನ್ ಲೋಡ್ ಮಾಡುವ ಸಮಯ ನಿರ್ಲಕ್ಷತನದಿಂದ ನಿಗದಿತ ಗುರುತನ್ನು ದಾಟಿ ಅನ್ ಲೋಡ್ ಮಾಡಿದ್ದರಿಂದ ಒಮ್ಮೆಲೆ ಟಿಪ್ಪರ್ 40 ಅಡಿ ಕೆಳಗೆ ಮಗುಚಿ ಬಿದ್ದು ,ಚಾಲಕ ಟಿಪ್ಪರ್ ಒಳಗೆ ಸಿಕ್ಕಿ ಹಾಕಿಕೊಂಡು ಗಂಭೀರ ಗಾಯಗೊಂಡಿದ್ದರು. ತಕ್ಷಣ ಚಾಲಕನನ್ನು ಚಿಕಿತ್ಸೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಅದಗಾಲೇ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ