ಮಂಗಳೂರು, ಆ 03 (DaijiworldNews/MS): ಸೋಮವಾರ ಮಧ್ಯಾಹ್ನದ ಬಳಿಕ ಕರಾವಳಿಯಲ್ಲಿ ಸುರಿದ ಮಳೆಯೂ ಸುಳ್ಯ, ಕಡಬ ತಾಲೂಕಿನಲ್ಲಿ ಚಿತ್ರಣವನ್ನೇ ಬದಲಿಸಿದ್ದು , ಭೂಕುಸಿತ, ನೆರೆ ಜನ ಜೀವನವನ್ನೇ ಬುಡಮೇಲಾಗಿಸಿದೆ.
ಇನ್ನೊಂದೆಡೆ ಆ. ೬ ರವರೆಗೆ ಮುಂದಿನ ಮೂರು ದಿನ ಕರಾವಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಕರಾವಳಿಗರು ಮತ್ತಷ್ಟು ಎಚ್ಚರವಾಗಿರುವಂತೆ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಮೇಘ ಸ್ಪೋಟದ ರೀತಿಯಲ್ಲಿ ಮಳೆಯಿಂದಾಗಿ ಉಡುಪಿಯ ಬೈಂದೂರು ಶಿರೂರು ಪರಿಸರದಲ್ಲಿ ಮನೆಗಳಿಗೆ ಹಾನಿಯಾಗಿ , ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿದೆ. ನೆರೆ ನೀರಿನಿಂದ ಎಲ್ಲೆಡೆ ಜಲಾವೃತ್ತವಾಗಿದ್ದು ಸುಮಾರು ೨೫ ಮನೆ, ೪೦ ದೋಣಿಗಳಿಗೆ ಹಾನಿ ಸಂಭವಿಸಿದೆ.
ಭಾರಿ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಮೈಸೂರು–ಮಂಗಳೂರು ಹೆದ್ದಾರಿ ಬಂದ್ ಆಗಿದ್ದು, ಳ್ಯ ತಾಲ್ಲೂಕಿನ ಪೇರಾಜೆ ಹಾಗೂ ಆರಂಬೂರು ಬಳಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂರಾರು ವಾಹನಗಳು ರಸ್ತೆಯಲ್ಲಿ ಸಿಲುಕಿವೆ.