ಮಂಗಳೂರು, ಜ 28(SM): ನಿಗದಿತ ಅವಧಿಯೊಳಗೆ ತೆರಿಗೆ, ನೀರಿನ ಬಿಲ್ ಪಾವತಿಸದ ಅಂಗಡಿಗಳಿಗೆ ಸೋಮವಾರದಂದು ಏಕಾಏಕಿ ದಾಳಿ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ತೆರಿಗೆ ಪಾವತಿಸುವಂತೆ ಎಚ್ಚರಿಸಿದ್ದಾರೆ.
ಮಂಗಳೂರು ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಮತ್ತಿತರ ಇಲಾಖೆ ಅಧಿಕಾರಿಗಳು ಪಿವಿಎಸ್ ವೃತ್ತ, ಬಂಟ್ಸ್ ಹಾಸ್ಟೆಲ್ ಕಡೆಗಳಲ್ಲಿ ಇರುವ ವಾಣಿಜ್ಯ ಕಟ್ಟಡಗಳಿಗೆ, ಅಂಗಡಿಗಳಿಗೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಆಯುಕ್ತ ಮಹಮ್ಮದ್ ನಝೀರ್, ಕೆಲವರು ಹಲವು ವರ್ಷಗಳಿಂದ ತೆರಿಗೆಯನ್ನು ಪಾವತಿಸದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ನೀರಿನ ಬಿಲ್ ಕೂಡಾ ಪಾವತಿ ಮಾಡಿಲ್ಲ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಒಂದು ತಿಂಗಳಿನ ಒಳಗೆ ಎಲ್ಲರೂ ಟ್ರೇಡ್ ಲೈಸನ್ಸ್, ನೀರಿನ ತೆರಿಗೆ ಯಾವುದೇ ಇದ್ದರೂ ಕಟ್ಟಬೇಕೆಂದು ಅವರು ಖಡಕ್ ಆದೇಶ ನೀಡಿದರು.