ಕುಂದಾಪುರ,ಜ 28 (MSP): ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಕಾರ್ಮಿಕನೊಬ್ಬ ಕಡಲಬ್ಬರಕ್ಕೆ ಆಯತಪ್ಪಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಕಡಲತೀರದಲ್ಲಿ ನಡೆದಿದೆ. ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಕಾರ್ಮಿಕನನ್ನು ತ್ರಾಸಿ ಸಮೀಪದ ಹೊಸಪೇಟೆ ನಿವಾಸಿ ಕೃಷ್ಣ ಖಾರ್ವಿ (52) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ 5 ಗಂಟೆಗೆ ಕೃಷ್ಣ ಖಾರ್ವಿ ಇತರ ಇಬ್ಬರು ಮೀನುಗಾರರೊಡನೆ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಕೃಷ್ಣ ಖಾರ್ವಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಸಮುದ್ರಕ್ಕೆ ಬಿದ್ದ ಖಾರ್ವಿಯವರನ್ನು ತಕ್ಷಣ ಮೇಲೆಕ್ಕೆತ್ತಲಾಯಿತಾದರೂ ಕೃಷ್ಣ ಖಾರ್ವಿ ಬದುಕುಳಿಯಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.